ನೋಟುಗಳ ರದ್ದತಿ ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ತಮ್ಮ ‘ಮನ್ ಕೀ ಬಾತ್’ ಭಾಷಣದಲ್ಲಿ ಈ ಕುರಿತಂತೆ ಸುಳಿವು ನೀಡಿದ್ದರು.

ಬೆಂಗಳೂರು(ನ.19): ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟುಗಳ ಅಮಾನ್ಯ ಮೂಲಕ ಕಪ್ಪು ಹಣದ ವಿರುದ್ಧ ಯುದ್ಧವನ್ನೇ ಸಾರಿದ್ದಾರೆ. ಇಂತಹ ಕಠಿಣ ಕ್ರಮ ಇಲ್ಲಿಗೆ ಮುಗಿಯುವುದಿಲ್ಲ, ಇನ್ನೂ ಇಂತಹ ಹಲವಾರು ಕಠಿಣ ಕ್ರಮಗಳು ಮೋದಿ ಬತ್ತಳಿಕೆಯಲ್ಲಿ ಸಾಕಷ್ಟಿವೆ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ಮತ್ತಷ್ಟು ಸುಧಾರಣೆಗಳ ಸುಳಿವು ನೀಡಿದ್ದಾರೆ.

ಭಾರತೀಯ ವಿದ್ಯಾಭವನದಲ್ಲಿ ಶುಕ್ರವಾರ ಭ್ರಷ್ಟಾಚಾರ ಮತ್ತು ಕಪ್ಪು ಹಣ ನಿಯಂತ್ರಣಕ್ಕಾಗಿ ಒಂದು ಕ್ರಾಂತಿ ವಿಷಯ ಕುರಿತು ಮಾತನಾಡಿದ ಅವರು, ನೋಟುಗಳ ರದ್ದತಿ ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ತಮ್ಮ ‘ಮನ್ ಕೀ ಬಾತ್’ ಭಾಷಣದಲ್ಲಿ ಈ ಕುರಿತಂತೆ ಸುಳಿವು ನೀಡಿದ್ದರು. ಆದರೆ, ಕಾಳಧನಿಕರು ಅದನ್ನು ಗ್ರಹಿಸದೇ ತಮ್ಮ ಅಕ್ರಮ ಹಣವನ್ನು ಬಿಟ್ಟು ಕೊಡಲು ಮುಂದಾಗಲಿಲ್ಲ. ಹಾಗಾಗಿಯೇ ಅಂತಿಮವಾಗಿ ಯುದ್ಧವನ್ನೇ ಸಾರಬೇಕಾಯಿತು ಎಂದು ವಿಶ್ಲೇಷಿಸಿದರು.

ದೇಶದಲ್ಲಿ 500 ಹಾಗೂ 1000 ಮುಖಬೆಲೆಯ ನೋಟುಗಳ ರದ್ದತಿಯಿಂದ ಯಾವುದೇ ಬಡವರಿಗೆ, ಮಧ್ಯಮ ವರ್ಗದವರಿಗೆ, ತೆರಿಗೆ ಪಾವತಿಸುವವರಿಗೆ ಸಮಸ್ಯೆ ಆಗುವುದಿಲ್ಲ. ಬದಲಾಗಿ ನೆರೆ ರಾಷ್ಟ್ರ ಪಾಕಿಸ್ತಾನ, ಅಕ್ರಮ ಶಸಾಸ ಸಾಗಾಣಿಕೆದಾರರು, ಹವಾಲಾ ಕುಳಗಳು, ಭಯೋತ್ಪಾದನೆ ಸಂಘಟನೆಗಳು, ಪ್ರತ್ಯೇಕತಾವಾದಿಗಳು ಹಾಗೂ ಸಮಾಜ ವಿರೋ ಶಕ್ತಿಗಳಿಗೆ ಮಾತ್ರ ತೊಂದರೆ ಆಗಲಿದೆ. ಆದರೆ ಮಮತಾ ಬ್ಯಾನರ್ಜಿ ಹಾಗೂ ಅರವಿಂದ್ ಕೇಜ್ರಿವಾಲ್‌ರಂತಹ ರಾಜಕಾರಣಿಗಳು ದೇಶದ ಜನರಿಗೆ ತೊಂದರೆ ಆಗುತ್ತಿದೆ ಎಂದು ಹುಯಿಲೆಬ್ಬಿಸ ತೊಡಗಿದ್ದಾರೆ. ಸಂಸತ್ತಿನಲ್ಲಿ ಕಳೆದ ಎರಡು ದಿನಗಳಿಂದ ವಿಪಕ್ಷಗಳು ಗದ್ದಲ ನಡೆಸುತ್ತಿವೆ. ಹೀಗಾಗಿ ಸೂಟು ಯಾರಿಗೆ ಹಾಗೂ ಬೂಟು ಯಾರಿಗೆ ಎಂಬುದನ್ನು ದೇಶದ ನಾಗರಿಕರೇ ನಿರ್ಧಾರ ಮಾಡಲಿದ್ದಾರೆ ಎಂದು ಪ್ರತಿಪಕ್ಷಗಳನ್ನು ಟೀಕಿಸಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿ 2014ರ ಮೇ 27ರಂದು ಆರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ವಿದೇಶದಲ್ಲಿರುವ ಕಪ್ಪು ಹಣ ವಾಪಸಾತಿಗೆ ಟಾಸ್‌‌ಕೆರ್ಸ್ ರಚನೆ, ಕಪ್ಪು ಹಣದ ಮೇಲೆ ಶೇ.45ರಷ್ಟು ದಂಡ ಹೇರಿಕೆ, ಪನಾಮಾ ಲೀಕ್ಸ್ ನಂತರ ಅಂತಾರಾಷ್ಟ್ರೀಯ ಒಪ್ಪಂದದ ಪರಿಷ್ಕರಣೆ, ಅಮೆರಿಕದೊಂದಿಗೆ ತೆರಿಗೆ ವಿನಿಮಯಕ್ಕೆ ಸಹಿ, ಬೇರೆ ದೇಶಗಳೊಂದಿಗೆ ವಹಿವಾಟು ನಡೆಸಲು ಡಿಟಿಎಎ ಒಪ್ಪಂದಕ್ಕೆ ಸಹಿ ಹಾಗೂ ಸ್ವಯಂ ಆದಾಯ ತೆರಿಗೆ ಘೋಷಣೆ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಅದರ ಪರಿಣಾಮವಾಗಿ 65 ಸಾವಿರ ಕೋಟಿ ರೂ. ತೆರಿಗೆ ಮೂಲಕ ಸರ್ಕಾರಕ್ಕೆ ಸಂಗ್ರಹವಾಯಿತು. ನೋಟು ರದ್ದತಿ ಕುರಿತಂತೆ ಗೌಪ್ಯತೆ ಕಾಪಾಡಿಕೊಂಡ ಪರಿಣಾಮವಾಗಿಯೇ ಕಾಳಧನಿಕರು ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಆದಾಗ್ಯೂ ಪ್ರಧಾನಿ ಮೋದಿ ನೋಟು ರದ್ದತಿ ಕುರಿತಂತೆ ನೀಡಿದ ಸುಳಿವನ್ನು ಗ್ರಹಿಸದ ಅಕ್ರಮ ಶಕ್ತಿಗಳಿಗೆ ಈ ನಿರ್ಧಾರ ಆಘಾತ ತಂದಿದೆ. ಅದಕ್ಕಾಗಿಯೇ ಇವತ್ತು ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಎನ್.ರವಿಕುಮಾರ್, ಸಂಸದ ಪಿ.ಸಿ.ಮೋಹನ್ ಮತ್ತಿತರರಿದ್ದರು.