ಬೆಂಗಳೂರು[ಜೂ.15] :  ವೇತನ ತಾರತಮ್ಯ ನಿವಾರಿಸುವ ಔರಾದ್ಕರ್‌ ಸಮಿತಿ ಶಿಫಾರಸು ಜಾರಿಗೊಳಿಸುವ ಕುರಿತು ರಾಜ್ಯ ಪೊಲೀಸರಿಗೆ ಮುಂದಿನ 10 ದಿನಗಳೊಳಗೆ ಸಿಹಿ ಸುದ್ದಿ ನೀಡುವುದಾಗಿ ಗೃಹ ಸಚಿವ ಎಂ.ಬಿ. ಪಾಟೀಲ್‌ ವಾಗ್ದಾನ ಮಾಡಿದ್ದಾರೆ.

ಔರಾದ್ಕರ್‌ ವರದಿ ಜಾರಿ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಗೃಹ ಇಲಾಖೆ, ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ವೇತನ ಪರಿಷ್ಕರಣೆ ಮತ್ತು ಇಲಾಖೆ ಸುಧಾರಣೆಗಾಗಿ ರಾಘವೇಂದ್ರ ಔರಾದ್ಕರ್‌ ಸಮಿತಿ ವರದಿ ಶಿಫಾರಸುಗಳ ಜಾರಿ ವಿಚಾರದಲ್ಲಿ ಮುಂದಿನ 10 ದಿನ ಅಥವಾ ಎರಡು ವಾರದೊಳಗೆ ಸಕಾರಾತ್ಮಕ ನಿರ್ಧಾರವೊಂದು ಹೊರ ಬೀಳಲಿದೆ ಎಂದರು.

ಈ ಕುರಿತು ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಪೂರಕ ಮಾಹಿತಿ ನೀಡಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ರಾಜ್ಯ ಪೊಲೀಸರಿಗೆ ಸಿಹಿ ಸುದ್ದಿ ನೀಡುವುದಾಗಿ ಅವರು ಹೇಳಿದರು.

ಸಮಿತಿ ಶಿಫಾರಸು ಜಾರಿ ಬಗ್ಗೆ ಪೊಲೀಸ್‌ ಇಲಾಖೆ ಸಿಬ್ಬಂದಿ ಸಾಕಷ್ಟುನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್‌ ಇಲಾಖೆ ಸಿಬ್ಬಂದಿಗೆ ಹುದ್ದೆ ಮತ್ತು ವೇತನದಲ್ಲಿ ತಾರತಮ್ಯವಾಗುತ್ತಿದೆ. ಹಾಗಾಗಿ ಕೆಳ ಹಂತದಲ್ಲಿರುವವರನ್ನು ಸಮಾನ ಹುದ್ದೆಗೆ ತಂದಾಗ ನ್ಯಾಯ ಸಿಗಲಿದೆ ಎಂದು ತಿಳಿಸಿದರು.

ಉಳಿದ ಇಲಾಖೆ ಸಿಬ್ಬಂದಿಗೆ ಬಡ್ತಿ ಸಿಗುವ ರೀತಿಯಲ್ಲೇ ಪೊಲೀಸ್‌ ಸಿಬ್ಬಂದಿಗೂ ಬಡ್ತಿ ನೀಡಬೇಕಿದೆ. ಅಗ್ನಿಶಾಮಕ ದಳ, ಸಿಬ್ಬಂದಿ ತರಬೇತಿ ಸೇರಿದಂತೆ ಇತರೆ ವಿಭಾಗಗಳಲ್ಲಿ ಭತ್ಯೆಗಳ ಅಗತ್ಯವಿದೆ. ಇತರೆ ಇಲಾಖೆಗಳಿಗೆ ಪೊಲೀಸ್‌ ಇಲಾಖೆಗೂ ಸಮಾನಾಂತರ ಹುದ್ದರೆ ಸಿಗಬೇಕು ಎಂಬುದು ಪ್ರಮುಖ ಬೇಡಿಕೆ. ಉದಾಹರಣೆಗೆ ನಮ್ಮ ಇಲಾಖೆಯ ಡಿಸಿಪಿ ಹುದ್ದೆ, ಕಂದಾಯ ಇಲಾಖೆಯ ಎಸಿಗೆ ಸಮಾನಾಂತರ ಹುದ್ದೆಯಾಗಬೇಕು, ವೃತ್ತ ಆರಕ್ಷಕ ನಿರೀಕ್ಷ ಹುದ್ದೆ ಗ್ರೇಡ್‌ 1 ತಹಶೀಲ್ದಾರ್‌ ಹುದ್ದೆಗೆ ಸಮಾನವಾಗಬೇಕು. ಇತರೆ ಇಲಾಖೆಗಳಲ್ಲಿ ಬಡ್ತಿಗೆ ಸಮಾನವಾಗಿ ಪೊಲೀಸ್‌ ಇಲಾಖೆಯಲ್ಲಿ ಸಮಾನ ಶ್ರೇಣಿ ಬಡ್ತಿ ಸಿಗಬೇಕು. ಬೇರೆ ಇಲಾಖೆಯಲ್ಲಿ ಐದು ವರ್ಷಕ್ಕೆ ಬಡ್ತಿ ಸಿಕ್ಕರೆ, ನಮ್ಮ ಇಲಾಖೆಯಲ್ಲಿ ಹತ್ತು, ಹದಿನೈದು ವರ್ಷವಾಗುತ್ತೆ. ಈ ಎಲ್ಲದರ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರ ನೀಡಿದ್ದೇವೆ. ಮುಖ್ಯಮಂತ್ರಿಗಳು ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳು ಗಮನಿಸಿದ್ದಾರೆ ಎಂದು ಹೇಳಿದರು.

ನಮ್ಮ ಇಲಾಖೆಯನ್ನು ಇತರೆ ಇಲಾಖೆಯೊಂದಿಗೂ ಹೋಲಿಸಲು ಸಾಧ್ಯವೇ ಇಲ್ಲ. ಶಿಕ್ಷಕರು ತರಗತಿಯಲ್ಲಿ 5ರಿಂದ 10 ಗಂಟೆ ಪಾಠ ಮಾಡಿದರೆ, ನಮ್ಮ ಪೊಲೀಸರು 12ರಿಂದ 14 ಗಂಟೆ ಕೆಲಸ ಮಾಡುತ್ತಿದ್ದಾರೆ. ಹಾಗಿದ್ದರೂ ಅನ್ಯ ಇಲಾಖೆ ಸಿಬ್ಬಂದಿ ಹುದ್ದೆಗೆ ಸಮಾನವಾಗಿ ಪರಿಗಣಿಸಬೇಕು ಎಂಬ ನ್ಯಾಯಯುತ ಬೇಡಿಕೆ ಇಡಲಾಗಿದೆ. ಇದಕ್ಕೆ ಪ್ರತಿ ವರ್ಷ ಸರ್ಕಾರಕ್ಕೆ 600 ಕೋಟಿ ರೂ. ಹೊರೆಯಾಗಲಿದೆ ಎಂದು ತಿಳಿಸಿದರು.

ನನ್ನ ಮುಖ ನೋಡಿ : ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ವರದಿ ವಿಚಾರವಾಗಿ ಹಣಕಾಸು ಇಲಾಖೆಯು ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸಿಲ್ಲ. ಬದಲಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ನನ್ನ ಮುಖ ಹೀಗಿರುತ್ತಿತ್ತಾ, ನನ್ನ ಮುಖ ನೋಡಿ ಎಂದು ಹಸನ್ಮುಖರಾಗಿ ಎಂ.ಬಿ. ಪಾಟೀಲ್‌ ಹೇಳಿದರು.