ಬೆಂಗಳೂರು: ಜೆಡಿಎಸ್‌ಗೆ ಹೊಸ ದಳಪತಿ ನೇಮಕವಾಗುತ್ತಿದ್ದಂತೆ ಹೊಸ ತಂಡ ರಚನೆಯ ಲೆಕ್ಕಾಚಾರ ಶುರುವಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ನೂತನ ರಾಜ್ಯ ಘಟಕದ ಪುನಾರಚನೆ ಮಾಡಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ. ಜೆಡಿಎಸ್ ನೂತನ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ ಎಚ್. ವಿಶ್ವನಾಥ್ ನೇಮಕವಾಗುತ್ತಿದ್ದಂತೆ ರಾಜ್ಯ ಘಟಕವನ್ನು ಪುನಾರಚನೆ ಮಾಡುವ ಲೆಕ್ಕಾಚಾರವು ಪಕ್ಷದಲ್ಲಿತ್ತು. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಿರುವ ಕಾರಣ ಯಾವುದೇ ಬದಲಾವಣೆ ಮಾಡದೆ ಚುನಾವಣೆಯತ್ತ ಹೆಚ್ಚಿನ ನಿಗಾವಹಿಸಲು ಪಕ್ಷದ ಮುಖಂಡರು ಆಲೋಚಿಸಿದ್ದಾರೆ. 

 ದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದುಕೊಳ್ಳಲು ಮತ್ತು ಸ್ಥಳೀಯ ಮಟ್ಟದಲ್ಲಿ ಈ ಚುನಾವಣೆಯು ಮಹತ್ವದ್ದಾಗಿದೆ. ಒಂದು ವೇಳೆ ರಾಜ್ಯ ಘಟಕ ಪುನಾರಚನೆ ಮಾಡಿದಲ್ಲಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಚುನಾವಣೆ ಬಳಿಕವಷ್ಟೇ ರಾಜ್ಯ ಘಟಕದ ಪುನಾರಚನೆಗೆ ಕೈ ಹಾಕುವುದು ಬಹುತೇಕ ಖಚಿತ ಎಂದು ಪಕ್ಷದ ಮೂಲಗಳು ಹೇಳಿವೆ. 

ರಾಜ್ಯ ಘಟಕ ಪುನಾರಚನೆ ವೇಳೆ ಪಕ್ಷಕ್ಕಾಗಿ ಶ್ರಮಿಸಿದವರಿಗೆ ಮತ್ತು ವಿಧಾನಸಭಾ  ಚುನಾವಣೆಯಲ್ಲಿ ಸೋಲನುಭವಿಸಿದ ಮಾಜಿ ಶಾಸಕರಿಗೆ ಆದ್ಯತೆ ನೀಡಲು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಆಸಕ್ತಿ ಹೊಂದಿದ್ದಾರೆ. ಪಕ್ಷದ ಬಲವರ್ಧನೆಗಾಗಿ ಅವರನ್ನು ಬಳಸಿಕೊಳ್ಳುವ ಸಂಬಂಧ ಅವರಿಗೆ ಅವಕಾಶ ನೀಡಲು ಮನಸ್ಸು ಮಾಡಿದ್ದಾರೆ. 

ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಬಲವರ್ಧನೆಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕರಿಗೆ ಪಕ್ಷದಲ್ಲಿ ವಿವಿಧ ಹಂತದ ಸ್ಥಾನಮಾನಗಳನ್ನು ನೀಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಪಕ್ಷಕ್ಕೆ ಬಂದು ವಿಶ್ವನಾಥ್ ಅವರಿಗೆ ಕೇವಲ ಒಂದು ವರ್ಷ ಮಾತ್ರವಾಗಿದ್ದು, ಪಕ್ಷದಲ್ಲಿ ಹಲವರನ್ನು ಪರಿಚಯ ಮಾಡಿಕೊಳ್ಳಬೇಕಿದೆ. ಇದಕ್ಕೆ ಸಮಯಾವಕಾಶದ ಅಗತ್ಯ ಇದೆ. ಜಿಲ್ಲಾ, ತಾಲೂಕು ಸೇರಿದಂತೆ ತಳ್ಳಮಟ್ಟದ ನಾಯಕರ ಕಾರ್ಯವೈಖರಿ ಕುರಿತು ವಿಶ್ವನಾಥ್ ತಿಳಿದುಕೊಳ್ಳಬೇಕಿದೆ. 

ಅಲ್ಲದೇ, ಸದ್ಯಕ್ಕೆ ರಾಜ್ಯ ಘಟಕದಲ್ಲಿರುವವರ ಪೈಕಿ  ಯಾರನ್ನು ಕೈ ಬಿಟ್ಟು, ಯಾರಿಗೆ ಸ್ಥಾನ ನೀಡಬೇಕು ಎಂಬುದರ ಕುರಿತು ತಮ್ಮದೇ ಆದ ಮೂಲಗಳಿಂದ ಸಂಗ್ರಹಿಸಬೇಕು. ಬಳಿಕವಷ್ಟೇ ರಾಜ್ಯ ಘಟಕದ ಪುನಾರಚನೆ ಮಾಡುವುದು ಒಳಿತು ಎಂಬುದು ವಿಶ್ವನಾಥ್ ಅವರ ಅನಿಸಿಕೆಯೂ ಆಗಿದೆ ಎನ್ನಲಾಗಿದೆ. ಏನಿದ್ದರೂ ದೇವೇಗೌಡರ ತೀರ್ಮಾ ನವೇ ಅಂತಿಮ ಎಂದು ಹೇಳಲಾಗಿದೆ.