ನವದೆಹಲಿ: ದೇಶದ ಅತೀ ವೇಗದ ರೈಲು ಎಂಬ ಖ್ಯಾತಿಗೊಳಗಾದ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿಗೆ ಪರ್ಯಾಯ ಎಂದೇ ಹೇಳಲಾಗಿರುವ ಟ್ರೇನ್‌-18(ಇಂಜಿನ್‌ಲೆಸ್‌ ರೈಲು) ರೈಲು ಸೇವೆಗೆ ಡಿ.29ಕ್ಕೆ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಈಗಾಗಲೇ ಹಲವು ಸುತ್ತಿನ ಪರೀಕ್ಷಾರ್ಥಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ದೇಶದ ಅತಿ ವೇಗದ ಹಾಗೂ ಇಂಜಿನ್‌ಲೆಸ್‌ ಟ್ರೇನ್‌-18 ದೆಹಲಿ ಮತ್ತು ವಾರಣಾಸಿ ಮಾರ್ಗದ ನಡುವೆ ಕಾರ್ಯಾರಂಭ ಮಾಡಲಿದೆ ಎಂದು ಬುಧವಾರ ಮೂಲಗಳು ತಿಳಿಸಿವೆ.

ಟ್ರೈನ್‌-18ನಲ್ಲಿ ಜಿಪಿಎಸ್‌ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ವೈಫೈ, ಜೈವಿಕ ನಿರ್ವಾತ ಶೌಚಾಲಯಗಳು, ಎಲ್‌ಇಡಿ ಲೈಟ್‌ಗಳು, ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌ಗಳು, ತಾಪಮಾನಕ್ಕೆ ತಕ್ಕ ಹಾಗೆ ಹವಾಮಾನ ನಿಯಂತ್ರಿತ ವ್ಯವಸ್ಥೆ ಸೇರಿದಂತೆ ಇತರ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ನವದೆಹಲಿಯಿಂದ ಬೆಳಗ್ಗೆ 6 ಗಂಟೆಗೆ ಹೊರಡಲಿರುವ ಟ್ರೈನ್‌-18 ವಾರಣಾಸಿಗೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ. ಮಧ್ಯಾಹ್ನ 2.30ಕ್ಕೆ ವಾರಣಾಸಿಯಿಂದ ಹೊರಟು, ಅದೇ ದಿನ ರಾತ್ರಿ 10.30ಕ್ಕೆ ಪುನಃ ದೆಹಲಿಗೆ ಬಂದು ಸೇರುವಂತೆ ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ.

ಟ್ರೈನ್‌-18 ಕಾರ್ಯವೈಖರಿಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದ ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಅವರು, ಇದೇ ವಿತ್ತೀಯ ವರ್ಷದಲ್ಲಿ ಇದೇ ರೀತಿಯ ಇನ್ನೂ 4 ರೈಲುಗಳನ್ನು ತಯಾರಿಸುವಂತೆ ಚೆನ್ನೈನಲ್ಲಿರುವ ಐಸಿಎಫ್‌ಗೆ ಸೂಚಿದ್ದರು.