Asianet Suvarna News Asianet Suvarna News

ವಿದೇಶಕ್ಕೆ ಹೋಗುವವರಿಗೆ ಸರ್ಕಾರ ನೆರವು

ಅರಬ್‌ ರಾಷ್ಟ್ರಗಳೂ ಸೇರಿದಂತೆ ವಿದೇಶಗಳಿಗೆ ಉದ್ಯೋಗಕ್ಕಾಗಿ ತೆರಳುವ ರಾಜ್ಯದ ಯುವಕರಿಗೆ ಸೂಕ್ತ ತರಬೇತಿ ಹಾಗೂ ವಿದೇಶ ಪ್ರಯಾಣಕ್ಕೆ ಅಗತ್ಯ ಸಹಾಯ ಮಾಡಲು ಅಂತಾರಾಷ್ಟ್ರೀಯ ವಲಸೆ ಕೇಂದ್ರ ಆರಂಭಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.

Soon Immigration Union Begins In Karnataka Says RV Deshpande

ಬೆಂಗಳೂರು :  ಅರಬ್‌ ರಾಷ್ಟ್ರಗಳೂ ಸೇರಿದಂತೆ ವಿದೇಶಗಳಿಗೆ ಉದ್ಯೋಗಕ್ಕಾಗಿ ತೆರಳುವ ರಾಜ್ಯದ ಯುವಕರಿಗೆ ಸೂಕ್ತ ತರಬೇತಿ ಹಾಗೂ ವಿದೇಶ ಪ್ರಯಾಣಕ್ಕೆ ಅಗತ್ಯ ಸಹಾಯ ಮಾಡಲು ಅಂತಾರಾಷ್ಟ್ರೀಯ ವಲಸೆ ಕೇಂದ್ರ ಆರಂಭಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭಟ್ಕಳ ಮತ್ತಿತರ ಪ್ರದೇಶದಿಂದ ಸೌದಿ ರಾಷ್ಟ್ರಗಳಿಗೆ ಸಾವಿರಾರು ಮಂದಿ ಉದ್ಯೋಗಕ್ಕಾಗಿ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿ ಉದ್ಯೋಗ ಕಳೆದುಕೊಂಡು ವಾಪಸು ಕೂಡ ಬರುತ್ತಿದ್ದಾರೆ. ಅಂತಹವರ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಲಾಗುವುದು. ಇದರ ಜತೆಗೆ ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋಗುವವರಿಗೆ ಅಗತ್ಯ ತರಬೇತಿ ಹಾಗೂ ಸರ್ಕಾರದ ಮೂಲಕವೇ ವಿದೇಶಕ್ಕೆ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ. ಈ ಕುರಿತ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ಇದು ಪ್ರತಿಭಾ ಪಲಾಯನಕ್ಕೆ ಪ್ರೋತ್ಸಾಹಿಸಿದಂತಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವಿದೇಶಕ್ಕೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ವಿದೇಶಕ್ಕೆ ಹೋಗುವ ಆಸೆಯಿಂದ ಹಲವಾರು ಮಂದಿ ಮೋಸ ಹೋಗುತ್ತಿದ್ದಾರೆ. ಆದರೆ, ಅವರು ಏಜೆಂಟರ ಹಾವಳಿಗೆ ಸಿಲುಕಿ ಮೋಸ ಹೋಗುವುದನ್ನು ತಪ್ಪಿಸುವುದು ನಮ್ಮ ಉದ್ದೇಶ. ಇದು ಇನ್ನೂ ಪರಿಶೀಲನಾ ಹಂತದಲ್ಲಿದೆ ಎಂದು ಹೇಳಿದರು.

ಸ್ಕಿಲ್ಸ್‌ ಆನ್‌ ವೀಲ್ಸ್‌:  ಪರಿಶಿಷ್ಟಪಂಗಡ ಹಾಗೂ ಅಂಗವಿಕಲ ಯುವಕ-ಯುವತಿಯರಿಗೆ ಮನೆ ಬಾಗಿಲಿಗೆ ಉದ್ಯೋಗ ತರಬೇತಿ ನೀಡಲು ಸಂಚಾರಿ ತರಬೇತಿ ಕೇಂದ್ರ ಆರಂಭಿಸಲಾಗುವುದು.‘ಸ್ಕಿಲ್ಸ್‌ ಆನ್‌ ವೀಲ್ಸ್‌’ ಹೆಸರಿನಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಕಾರದಿಂದ ಉದ್ಯೋಗ ಹಾಗೂ ಕೌಶಲ್ಯ ತರಬೇತಿ ಅಗತ್ಯವಿರುವ ಯುವ ಸಮುದಾಯಕ್ಕೆ ತರಬೇತಿ ನೀಡಲಾಗುವುದು. ಮೊದಲ ಹಂತದಲ್ಲಿ ಎಂಟು ಜಿಲ್ಲೆಗಳಲ್ಲಿ ಯೋಜನೆ ಆರಂಭವಾಗಲಿದ್ದು, ಸದ್ಯದಲ್ಲೇ ಜಿಲ್ಲೆಗಳ ಹೆಸರು ಘೋಷಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಳೆದ ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲ ಅಂಶಗಳನ್ನೂ ಜಾರಿಗೆ ತರಲಾಗುವುದು. ಯುವಕರಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ಕಾರ್ಯಕ್ರಮಗಳಾಗಿರುವುದರಿಂದ ಸರ್ಕಾರವೂ ಬಜೆಟ್‌ನಲ್ಲಿ ಹೆಚ್ಚು ಪರಿಷ್ಕರಣೆ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ಕೌಶಲ್ಯ ಅಕಾಡೆಮಿ ಸ್ಥಾಪನೆ ಸೇರಿದಂತೆ ಹಿಂದಿನ ಸರ್ಕಾರದ ಘೋಷಣೆಗಳನ್ನು ಅನುಷ್ಠಾನಗೊಳಿಸಲಾಗುವುದು. ಇದಕ್ಕಾಗಿ ಕೆಂಗೇರಿ ಬಳಿ 14 ಎಕರೆ ಜಾಗ ಗುರುತಿಸಿದ್ದು, ಸದ್ಯದಲ್ಲೇ ಸಚಿವ ಸಂಪುಟ ಅನುಮೋದನೆ ಪಡೆದು ಪ್ರಾರಂಭಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಮೋದಿ ಪಕೋಡಾ ಹೇಳಿಕೆ ತಪ್ಪಲ್ಲ : ಪಕೋಡಾ ಮಾರಿ ಜೀವನ ಮಾಡುವುದು ಸಹ ಒಂದು ಉದ್ಯೋಗವೇ ಎಂದು ಹೇಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿಕೆಯನ್ನು ಕೌಶಲ್ಯಅಭಿವೃದ್ಧಿ ಸಚಿವ ಆರ್‌.ವಿ. ದೇಶಪಾಂಡೆ ಸ್ವಾಗತಿಸಿದ್ದಾರೆ.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಒಬ್ಬ ಮಾನವ ಗೌರವಾನ್ವಿತ ಜೀವನ ನಡೆಸಲು ಯಾವ ಕೆಲಸ ಮಾಡಿದರೂ ತಪ್ಪಿಲ್ಲ. ಕೆಲಸವನ್ನು ನ್ಯಾಯಯುತ ಹಾಗೂ ಪ್ರಾಮಾಣಿಕವಾಗಿ ಮಾಡಬೇಕಷ್ಟೆ. ಪ್ರಧಾನಮಂತ್ರಿ ಹೇಳಿಕೆಯನ್ನು ಸಮರ್ಥಿಸುತ್ತಿಲ್ಲ. ಆದರೆ, ಅವರು ಹೊಸದನ್ನೇನೂ ಹೇಳಿಲ್ಲ. ಪಕೋಡಾ ಅಂಗಡಿಯಾಗಲಿ ಬೇರೆ ಯಾವುದೇ ಸಣ್ಣ ಅಂಗಡಿ ಆಗಲಿ ಈಗ ಇರುವಂತಹವುಗಳೇ. ಅವರು ಸಾಕಷ್ಟುದಿನಗಳಿಂದ ಗೌರವಯುತ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಅದನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.

Follow Us:
Download App:
  • android
  • ios