ಬೆಂಗಳೂರು(ಸೆ.20): ಖಾಸಗಿ ಸಹಭಾಗಿತ್ವದಲ್ಲಿ ನಗರದಲ್ಲಿ 1600 ಬಸ್ ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಹಳೆಯ ಬಸ್ ತಂಗುದಾಣಗಳನ್ನು ಕೆಡವಿ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ತಂಗುದಾಣಗಳನ್ನು ನಿರ್ಮಿಸಲಾಗುವುದು ಎಂದು ಮೇಯರ್ ಬಿ.ಎನ್. ಮಂಜುನಾಥರೆಡ್ಡಿ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ತಂಗುದಾಣವನ್ನು ಸೋಮವಾರ ಉದ್ಘಾಟಿಸಿದ ಅವರು, ಪಾಲಿಕೆ ಮುಂಭಾಗದಲ್ಲಿ ನಿರ್ಮಿಸಿರುವ ಮಾದರಿಯಲ್ಲಿಯೇ ಎಲ್ಲೆಡೆ ಸುಸಜ್ಜಿತ ಶೆಲ್ಟರ್‌ಗಳನ್ನು ನಿರ್ಮಿಸುವುದಾಗಿ ತಿಳಿಸಿದರು. ಖಾಸಗಿ ಸಂಸ್ಥೆಗಳೇ ನಿರ್ಮಿಸಿ, ನಿರ್ವಹಣೆ ವಹಿಸಿಕೊಳ್ಳಲಿವೆ ಎಂದೂ ಹೇಳಿದರು.

ಅಗತ್ಯವಿದ್ದರಷ್ಟೇ ಮರಗಳ ಕಟಾವು

ನೃಪತುಂಗ ರಸ್ತೆಯಲ್ಲಿ ಟೆಂಡರ್‌ಶ್ಯೂರ್ ವಿಧಾನದಡಿ ರಸ್ತೆ ಅಭಿವೃದ್ಧಿಗೆ ಕೆಲ ಮರಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ನೂರಾರು ವರ್ಷ ಹಳೆಯದಾದ ಮರಗಳನ್ನು ಕಡಿಯಲಾಗುತ್ತದೆ. ಅವಶ್ಯಕವಿರುವಷ್ಟು ಮರಗಳನ್ನು ಕಟಾವು ಮಾಡಲಾಗುವುದು. ಸದ್ಯ ಎಷ್ಟು ಮರಗಳನ್ನು ಕಡಿಯಲಾಗುತ್ತದೆ ಎಂಬ ಮಾಹಿತಿ ಇಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಮೇಯರ್ ಎಸ್.ಪಿ.ಹೇಮಲತಾ, ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ, ಪಾಲಿಕೆ ಸದಸ್ಯ ವಸಂತಕುಮಾರ್, ರಸ್ತೆ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್ ಉಪಸ್ಥಿತರಿದ್ದರು.

ಪ್ರಭಾವಿಗಳ ಮನೆಗಳ ಭವಿಷ್ಯ ಸರ್ಕಾರದ ಕೈಲಿ

ರಾಜಕಾಲುವೆ ಒತ್ತುವರಿ ತೆರವು ಸಂಬಂಧ ಸಣ್ಣ ಪ್ರಮಾಣದ ಒತ್ತುವರಿಯಾಗಿದ್ದರೆ ಪಾಲಿಕೆ ವತಿಯಿಂದಲೇ ತೆರವುಗೊಳಿಸಬಹುದು. ಆದರೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಈ ಸಂಬಂಧ ಜಿಲ್ಲಾಡಳಿತ ಇಲ್ಲವೇ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮೇಯರ್ ಬಿ.ಎನ್. ಮಂಜುನಾಥರೆಡ್ಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿನಗರದಲ್ಲಿ ನಟ ದರ್ಶನ್ ಮನೆ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್.ಎಸ್.ಆಸ್ಪತ್ರೆ ಸೇರಿದಂತೆ 65 ಕಟ್ಟಡಗಳು 7.06 ಎಕರೆ ಸರ್ಕಾರಿ ಭೂಮಿಯಲ್ಲಿ ನಿರ್ಮಾಣವಾಗಿದೆ ಎಂಬ ಮಾಹಿತಿಯಿದ್ದು, ಜಿಲ್ಲಾಡಳಿತ ಒತ್ತುವರಿ ತೆರವಿನ ಬಗ್ಗೆ ಕ್ರಮ ಕೈಗೊಳ್ಳಲಿದೆ. ಇದು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿರುವುದರಿಂದ ಪಾಲಿಕೆ ಪಾತ್ರವೇನಿಲ್ಲ ಎಂದು ತಿಳಿಸಿದರು.