ನವದೆಹಲಿ :  ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಧಿಕೃತವಾಗಿ ರಣಕಹಳೆ ಊದಿದ್ದು, 15 ಅಭ್ಯರ್ಥಿಗಳ ಮೊದಲ ಪಟ್ಟಿಘೋಷಣೆ ಮಾಡಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮತ್ತೆ ರಾಯ್‌ಬರೇಲಿಯಿಂದ ಕಣಕ್ಕೆ ಇಳಿಯಲಿದ್ದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೇಠಿಯಿಂದ ಪುನಃ ಅಗ್ನಿಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ. 15 ಜನರ ಪಟ್ಟಿಯಲ್ಲಿ 11 ಅಭ್ಯರ್ಥಿಗಳು ಉತ್ತರಪ್ರದೇಶಕ್ಕೆ ಸೇರಿದ್ದು, ಇನ್ನುಳಿದ ನಾಲ್ವರು ಅಭ್ಯರ್ಥಿಗಳು ಗುಜರಾತ್‌ಗೆ ಸೇರಿದ್ದಾರೆ.

ಪ್ರಮುಖರಲ್ಲಿ ಸೋನಿಯಾ ಹಾಗೂ ರಾಹುಲ್‌ ಅವರನ್ನು ಹೊರತುಪಡಿಸಿದರೆ, ಮಾಜಿ ಕೇಂದ್ರ ಸಚಿವರಾದ ಆರ್‌ಪಿಎನ್‌ ಸಿಂಗ್‌ ಕುಶಿನಗರದಿಂದ, ಸಲ್ಮಾನ್‌ ಖುರ್ಷಿದ್‌ ಫರೂಖಾಬಾದ್‌ನಿಂದ ಕಣಕ್ಕಿಳಿಯಲಿದ್ದಾರೆ. ಇವರು ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ಇನ್ನೊಬ್ಬ ಮಾಜಿ ಕೇಂದ್ರ ಸಚಿವ ಜಿತಿನ್‌ ಪ್ರಸಾದ ಅವರು ಧೌರಾಹ್ರಾದಿಂದ ಟಿಕೆಟ್‌ ಗಿಟ್ಟಿಸಿದ್ದಾರೆ. ಗುಜರಾತ್‌ನಲ್ಲಿ ಆನಂದ್‌ನಿಂದ ಹಿರಿಯ ಮುಖಂಡ ಭರತಸಿಂಹ ಸೋಳಂಕಿ ಅಭ್ಯರ್ಥಿಯಾಗಲಿದ್ದಾರೆ.

ಟಿಕೆಟ್‌ ಘೋಷಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ ಒಂದು ಹೆಜ್ಜೆ ಮುಂದಿರುವುದು ವಿಶೇಷ. ಸೋನಿಯಾ ಅವರು ಅನಾರೋಗ್ಯಪೀಡಿತರಾಗಿದ್ದು, ಅವರು ಸ್ಪರ್ಧಿಸುತ್ತಾರಾ ಇಲ್ಲವಾ ಎಂಬ ಊಹಾಪೋಹಗಳಿದ್ದವು. ಇನ್ನು ರಾಹುಲ್‌ ಅವರು ಅಮೇಠಿ ತೊರೆದು ಕರ್ನಾಟಕದ ಬೀದರ್‌ನಿಂದ ಸ್ಪರ್ಧಿಸಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಸುಳ್ಳಾಗಿದೆ.