ನವದೆಹಲಿ(ಜು.02): ರಾಯ್ ಬರೇಲಿಯ ಆಧುನಿಕ ರೈಲು ಕೋಚ್ ಫ್ಯಾಕ್ಟರಿ ಖಾಸಗೀಕರಣಕ್ಕೆ ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ, ತಮ್ಮ ಸ್ವಕ್ಷೇತ್ರ ರಾಯ್ ಬರೇಲಿಯ ಆಧುನಿಕ ರೈಲು ಬೋಗಿ ಕಾರ್ಖಾನೆಯ ಖಾಸಗೀಕರಣವನ್ನು ವಿರೋಧಿಸುವುದಾಗಿ ಹೇಳಿದರು.

ಖಾಸಗೀಕರಣದಿಂದಾಗಿ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳಲಿದ್ದು, ದೇಶದ  ಆಸ್ತಿಗಳನ್ನು ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ಹಂಚಿಕೆ ಮಾಡುವ ಭಾಗವಾಗಿ ರೈಲ್ವೆ ಘಟಕಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ  ಎಂದು ಸೋನಿಯಾ ಗಾಂಧಿ ಆರೋಪಿಸಿದರು.

ಇದೇ ವೇಳೆ ಪ್ರತ್ಯೇಕ ರೈಲ್ವೇ ಬಜೆಟ್ ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸೋನಿಯಾ ಗಾಂಧಿ ಟೀಕಿಸಿದ್ದು, ಸರ್ಕಾರಕ್ಕೆ ರೈಲ್ವೇ ಇಲಾಖೆ ನಿಭಾಯಿಸುವ ಇಚ್ಛಾಶಕ್ತಿ ಇಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಹರಿಹಾಯ್ದಿದ್ದಾರೆ.