ನವದೆಹಲಿ[ಫೆ.08]: ‘ಬಿಜೆಪಿಯಲ್ಲಿ ಧೈರ್ಯ ಹೊಂದಿರುವ ಏಕಮಾತ್ರ ವ್ಯಕ್ತಿ ಗಡ್ಕರಿ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮೆಚ್ಚುಗೆ ಸೂಚಿಸಿದ ಬೆನ್ನಲ್ಲೇ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಬಗ್ಗೆ ತೀವ್ರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಗಡ್ಕರಿ ಅವರು ತಮ್ಮ ಇಲಾಖೆಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸೋನಿಯಾ ಅವರು ಗುರುವಾರ ಲೋಕಸಭೆಯಲ್ಲಿ ಮೇಜುಕಟ್ಟಿಗೌರವ ಸೂಚಿಸಿದ್ದರೆ, ಕಾಂಗ್ರೆಸ್ಸಿನ ಸದಸ್ಯರೂ ತಮ್ಮ ನಾಯಕಿಗೆ ಸಾಥ್‌ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಗಡ್ಕರಿ, ಕೆಲಸ ಮಾಡಿಕೊಟ್ಟಿದ್ದಕ್ಕಾಗಿ ಪಕ್ಷಭೇದವಿಲ್ಲದೇ ಸಂಸದರು ನನ್ನನ್ನು ಹೊಗಳುತ್ತಾರೆ ಎಂದು ಹೇಳಿದರು. ಆಗ ಬಿಜೆಪಿ ಸದಸ್ಯರು ಮೇಜುಕುಟ್ಟಲು ಆರಂಭಿಸಿದರು. ಈ ವೇಳೆ ಎದ್ದು ನಿಂತ ಮಧ್ಯಪ್ರದೇಶದ ಬಿಜೆಪಿ ಸಂಸದ ಗಣೇಶ್‌ ಸಿಂಗ್‌, ಸಚಿವರು ಮಾಡಿರುವ ಅದ್ಭುತ ಕೆಲಸಕ್ಕೆ ಸದನ ಮೆಚ್ಚುಗೆ ಸೂಚಿಸಬೇಕು ಎಂದು ಸಲಹೆ ಮಾಡಿದರು. ಅಲ್ಲಿವರೆಗೆ ಗಡ್ಕರಿ ಭಾಷಣವನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ಸೋನಿಯಾ, ನಗುಮುಖದೊಂದಿಗೆ ಮೇಜು ಕುಟ್ಟಲು ಪ್ರಾರಂಭಿಸಿದರು. ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಇತರೆ ಸದಸ್ಯರೂ ಮೇಜುಕಟ್ಟಿಸಚಿವರಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ಬಿಜೆಪಿಗೆ ಮುಜುಗರವಾಗುವಂತಹ ಹೇಳಿಕೆಯನ್ನು ನೀಡುತ್ತಿರುವ ಗಡ್ಕರಿ, ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಹುಲ್‌ ಗಾಂಧಿ ಪಕ್ಕ ಕುಳಿತು ಗಂಭೀರ ಚರ್ಚೆಯಲ್ಲಿ ನಿರತರಾಗಿದ್ದುದು ಕೂಡ ಚರ್ಚೆಗೆ ಕಾರಣವಾಗಿತ್ತು.