ಬೀದರ್(ಅ.07): ಬೀದರ್'ನ ವ್ಯಕ್ತಿಯೊಬ್ಬ ಪಾಕಿಸ್ತಾನದ ಉಗ್ರ ಹಫೀಜ್ ಮಹ್ಮದ್ ಸಯೀದ್ ವಿರುದ್ಧ ಮಾತನಾಡಿದ್ದು, ಇದೀಗ ದುಬೈಯಲ್ಲಿರುವ ಆತನ ಮಗನಿಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ.

Add Asianetnews Kannada as a Preferred SourcegooglePreferred

ಬೀದರ್​​​​ನ ಬದ್ರುದ್ದಿನ್ ಕಾಲೋನಿ ನಿವಾಸಿ ಅಲಿಖಾನ್ ಅವರು ಹಲವಾರು ಜನಪರ ಹೋರಾಟ ನಡೆಸಿಕೊಂಡು ಜನರ ಸಂಕಷ್ಟಗಳಿಗೆ ಧ್ವನಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜೆಒಡಿ ಮುಖ್ಯಸ್ಥ ಹಫೀಸ್ ಮಹ್ಮದ್ ಸಯೀದ್ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಿತರಾದ ಬೀದರ್'ನ ಕರ್ನಾಟಕ ಟೈಗರ್ಸ್ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಲಿಖಾನ್ ಅವರು ಸಯೀದ್ ಹಾಗೂ ಪಾಕಿಸ್ತಾನ ವಿರುದ್ಧ ಮಾತನಾಡಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಪರಿಣಾಮವಾಗಿ ಇದೀಗ ದುಬೈಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅಲಿಖಾನ್ ಪುತ್ರ ಅಮೀರ್ ಖಾನ್'ಗೆ ದುಬೈನಲ್ಲಿ ನೆಲೆಸಿರುವ ಪಾಕ್ ವಲಸಿಗರಿಂದ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ.

ಕರೆ ಹಾಗೂ ವಾಟ್ಸ್'ಆಪ್ ಸಂದೇಶ ಕಳುಹಿಸಿರುವ ಪಾಕ್ ವಲಸಿಗರು 'ನಿಮ್ಮ ತಂದೆ ಹಫೀಜ್ ವಿರುದ್ಧ ಮಾತನಾಡಿದ್ದಾರೆ, ನೀನು ಸಾಯಬೇಕಾಗುತ್ತದೆ.' ಎಂದು ಜೀವ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಆತಂಕಗೊಂಡಿರುವ ಅಲಿಖಾನ್ ತನ್ನ ಮಗನನ್ನು ರಕ್ಷಿಸುವಂತೆ ಜಿಲ್ಲಾ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ತಂದೆ ಅಲಿಖಾನ್ ಮಾತನಾಡಿರುವುದೇನು?

'ಹಫೀಜ್​ ಸಯೀದ್ ನೀನು ಅಪ್ಪನಿಗೆ ಹುಟ್ಟಿದ್ದರೆ ಗಡಿ ಬಳಿ ಬಾ, ಇಲಿ ರೀತಿ ಮಾತನಾಡಬೇಡ. ಮೀಡಿಯಾ ಮುಂದೆ ಬಂದು ಮಾತನಾಡು. ನೀನು ಹೆಚ್ಚಿನ ಬುದ್ದಿವಂತಿಕೆ ತೋರಿಸಬೇಡ. ನನಗೆ ಮೋದಿ ಸರ್ಕಾರ ಅನುಮತಿ ಕೊಟ್ಟರೆ ಗಡಿ ಹತ್ತಿರ ಹೋಗಿ ನಿನ್ನನ್ನು ಸದೆಬಡಿತ್ತೀನಿ. ನೀನು ಭಾರೀ ಬುದ್ಧಿವಂತ ಅಂದು ಕೊಂಡಿದ್ದೀಯಾ? ನಿನ್ನ ಕೈಯಲ್ಲಿ ಏನೂ ಆಗಲ್ಲ. ನಿನ್ನನ್ನು ಹೊಡೆಯಲು ಸಣ್ಣ ಹುಡುಗ ಸಾಕು. ನಾವು ಜೋರಾಗಿ ಕೆಮ್ಮಿದರೆ ನಿನ್ನ ಹೃದಯ ಸ್ತಬ್ಧವಾಗುತ್ತದೆ' ಎಂದಿದ್ದಾರೆ.