ಕೇರಳ ಮಹಾಪ್ರವಾಹ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ರಾತ್ರಿ ಹಗಲೆನ್ನದೇ ಕಾರ್ಯಾಚರಣೆ ನಡೆಸಿ ಪ್ರವಾಹಕ್ಕೆ ಸಿಕ್ಕವರನ್ನು ರಕ್ಷಿಸಿದ್ದಾರೆ. ಯೋಧರು ಪ್ರವಾಹಕ್ಕೆ ಸಿಕ್ಕವರನ್ನು ರಕ್ಷಿಸುತ್ತಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ತಿರುವನಂತಪುರಂ (ಆ. 23): ‘ನಿಜವಾದ ಭಾರತೀಯರಾರೂ ಈ ಫೋಟೋವನ್ನು ಅಲ್ಲಗೆಳೆಯುವುದಿಲ್ಲ. ಇದು ನಮ್ಮ ಸೇನೆ... ನಮ್ಮ ಸೈನಿಕರು ದೇಶಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧರಿದ್ದಾರೆ’ ಎಂಬ ಒಕ್ಕಣೆಯೊಂದಿಗೆ ಯೋಧನ ಬೆನ್ನ ಮೇಲೆ ಕಾಲಿಟ್ಟು ಮಹಿಳೆಯೊಬ್ಬರು ಇಳಿಯುತ್ತಿರುವ ದೃಶ್ಯದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಮೈ ಇಂಡಿಯಾ’ ಮತ್ತು ‘ನರೇಂದ್ರ ಮೋದಿ-ಟ್ರೂ ಇಂಡಿಯನ್’ ಫೇಸ್ ಬುಕ್ ಪೇಜ್‌ಗಳು ಈ ಫೋಟೋವನ್ನು ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿವೆ. ಅದು ಸುಮಾರು 18,000 ಬಾರಿ ಶೇರ್ ಆಗಿದೆ. ಹೀಗೆ ಶೇರ್ ಆಗಿರುವ ಫೋಟೋದೊಂದಿಗೆ ಕೇರಳದಲ್ಲಿ ಮಹಾಮಳೆಗೆ ಸಿಲುಕಿರುವ ಜನರನ್ನು ಭಾರತೀಯ ಸೇನೆ ಹೇಗೆ ರಕ್ಷಿಸುತ್ತಿದೆ ಎಂದು ಹೇಳಲಾಗಿದೆ.

ಆದರೆ ನಿಜಕ್ಕೂ ಇದು ಕೇರಳದಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನರನ್ನು ಭಾರತೀಯ ಸೇನೆಯ ಯೋಧರು ರಕ್ಷಿಸುತ್ತಿರುವ ಫೋಟೋವೇ ಎಂದು ಪರಿಶೀಲಿಸಿದಾಗ, ಆ ಫೋಟೋದಲ್ಲಿರುವುದು ಭಾರತೀಯ ಸೇನೆಯ ಯೋಧರೇ ಅಲ್ಲ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ ಮೇಲ್ನೋಟಕ್ಕೇ ಇದು ಕಂಡುಬಂದರೂ ಭಾವನಾತ್ಮಕವಾಗಿ ಸಂದೇಶ ಕಟ್ಟಿಹಾಕುವುದರಿಂದ ಯಾರೂ ಆ ಬಗ್ಗೆ ಮರುಯೋಚಿಸದೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

ಹಾಗಿದ್ದರೆ ಈ ಚಿತ್ರ ಎಲ್ಲಿಯದ್ದು ಎಂದು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದು ಇರಾಕ್‌ನ ಫಲ್ಲುಝಾ ನಗರದ ನಾಗರಿಕರನ್ನು ಐಎಸ್‌ಐಎಸ್ 2016 ಜೂನ್‌ನಲ್ಲಿ ಬಿಡುಗಡೆ ಮಾಡಿದ್ದಾಗ ಪಿಎಂಯು (ಪಾಪ್ಯುಲರ್ ಮೊಬಿಲೈಸೇಶನ್ ಯೂನಿಟ್ಸ್) ಆ ಜನರ ನೆರವಿಗೆ ಧಾವಿಸಿದಾಗಿನ ಫೋಟೋ ಇದು ಎಂಬುದು ಪತ್ತೆಯಾಗಿದೆ. ಈ ಫೋಟೋವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಸುದ್ದಿ ಸೃಷ್ಟಿಸಲು
ಬಳಕೆಯಾಗುತ್ತಿದೆ. ಇದೇ ಫೋಟೋವನ್ನು ಕಾಶ್ಮೀರ ಪ್ರವಾಹ ಸಂದರ್ಭದಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಭಾರತೀಯ ಸೇನೆ ಎಂದು ಬಿಂಬಿಸಲಾಗಿತ್ತು. 

- ವೈರಲ್ ಚೆಕ್