600 ಚದರಡಿಗಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಿಸಿದ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಕಡ್ಡಾಯವಾಗಿ ‘ಸೋಲಾರ್ ವಾಟರ್ ಹೀಟರ್’ ಅಳವಡಿಸಬೇಕು ಎಂದು ರಾಜ್ಯ ಸರ್ಕಾರ ಜಾರಿ ಮಾಡಿರುವ ನಿಯಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಬೆಂಗಳೂರು: ನಗರ ಪಾಲಿಕೆ ಮತ್ತು ಪುರಸಭೆಗಳ ವ್ಯಾಪ್ತಿ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಭೂ ಮಾಲೀಕರು ಹಾಗೂ ಕಟ್ಟಡ ಮಾಲೀಕರು ಕಡ್ಡಾಯವಾಗಿ ಸ್ವಾಧೀನಾನುಭವ (ಒ.ಸಿ.) ಪತ್ರ ನೀಡಬೇಕು ಎಂದು ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ನಿಯಮವನ್ನು ಇತ್ತೀಚೆಗೆ ಅಸಿಂಧುಗೊಳಿಸಿದ್ದ ಹೈಕೋರ್ಟ್, ಇದೀಗ 600 ಚದರಡಿಗಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಿಸಿದ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಕಡ್ಡಾಯವಾಗಿ ‘ಸೋಲಾರ್ ವಾಟರ್ ಹೀಟರ್’ ಅಳವಡಿಸಬೇಕು ಎಂದು ರಾಜ್ಯ ಸರ್ಕಾರ ಜಾರಿ ಮಾಡಿರುವ ನಿಯಮವನ್ನು ಎತ್ತಿಹಿಡಿದಿದೆ.
ಹೌದು. ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ಪೂರೈಕೆ ಸಂಸ್ಥೆಗಳ ಮುಂದೆ ಸ್ವಾಧೀನಾನುಭವ ಪತ್ರ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ರೂಪಿಸಿದ ನಿಯಮ ಅಕ್ರಮ ಎಂದು ಹೈಕೋರ್ಟ್ ಇತ್ತೀಚೆಗೆ ಪ್ರಕರಣವೊಂದರ ಸಂಬಂಧ ತೀರ್ಪು ನೀಡಿತ್ತು.
ಆದರೆ, ಸೌರಶಕ್ತಿ ಬಳಕೆಯಿಂದ ಪರಿಸರ ಹಾಗೂ ಜನರಿಗಾಗುವ ಲಾಭಗಳು, ಜನರ ಮೇಲೆ ಬೀರಬಹುದಾದ ಆರ್ಥಿಕ ಹೊರೆ ಮತ್ತು ಸಂವಿಧಾನದ ಅವಕಾಶಗಳನ್ನು ಪರಾಮರ್ಶಿಸಿದ ಹೈಕೋರ್ಟ್, ವಸತಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಸೋಲಾರ್ ವಾಟರ್ ಹೀಟರ್ ಅಳವಡಿಕೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರದ ನಿಯಮವು ಸಕ್ರಮವಾಗಿದೆ ಎಂದು ಮತ್ತೊಂದು ಪ್ರಕರಣದಲ್ಲಿ ಆದೇಶಿಸಿದೆ.
ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್’ಸಿ)ದ ಅಧಿನಿಯಮಗಳ ಉಪ ನಿಯಮ 4.02(ವಿ)ಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿತ್ತು. ತಿದ್ದುಪಡಿ ನಿಯಮದಂತೆ ನಗರ ಪಾಲಿಕೆ, ಪುರಸಭೆಗಳ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಲಯದ ವ್ಯಾಪ್ತಿಗೆ ಬರುವ ಎಲ್ಲ 1200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ 600 ಚದರ ಅಡಿಗಿಂತ ಹೆಚ್ಚಿನ ಜಾಗದಲ್ಲಿ ನಿರ್ಮಿಸಿದ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಕಡ್ಡಾಯವಾಗಿ ಸೋಲಾರ್ ವಾಟರ್ ಹೀಟರ್ ಅಳವಡಿಸಬೇಕು. ಆ ಸಂಬಂಧ 2010ರ ಜುಲೈ 22ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ಇದೇ ನೋಟಿಫಿಕೇಷನ್ ಆಧರಿಸಿ ಕಲಬುರಗಿ ವಿದ್ಯುತ್ ಸರಬರಾಜು ಕಂಪನಿಯು, ಹಸ್ನುದ್ದೀನ್ ಎಂಬುವವರಿಗೆ 30/40 ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಿದ್ದ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಮನೆಯಲ್ಲಿ ಕಡ್ಡಾಯವಾಗಿ ಸೋಲಾರ್ ವಾಟರ್ ಹೀಟರ್ ಅಳವಡಿಸುವಂತೆ 2013ರ ಫೆ.25ರಂದು ಷರತ್ತು ವಿಧಿಸಿತ್ತು. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ತೀರ್ಪು ಏನು?: ಈ ನಿಯಮ ರೂಪಿಸಿ ಜಾರಿಗೊಳಿಸಿರುವುದು ಸರ್ಕಾರದ ನೀತಿ-ನಿರೂಪಣೆಗೆ ಸಂಬಂಧಿಸಿದೆ. ಅದರಲ್ಲೂ ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಕೈಗೊಂಡ ನಿರ್ಣಯದಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಇನ್ನು ಈ ನಿಯಮ ಯಾವ ವರ್ಗದ ಕಟ್ಟಡಗಳಿಗೆ ಪಕ್ಷಪಾತವಾಗಲಿದೆ ಎಂಬುದನ್ನು ಅರ್ಜಿದಾರ ಸ್ಪಷ್ಟಪಡಿಸಿಲ್ಲ. ಆದ್ದರಿಂದ ನಿರ್ದಿಷ್ಟ ವರ್ಗದ ಕಟ್ಟಡಗಳಲ್ಲಿ ಸೋಲಾರ್ ವಾಟರ್ ಹೀಟರ್ ಅಳವಡಿಕೆ ಮಾಡಲು ನಿರ್ದೇಶಿಸಿರುವುದು ಸಂವಿಧಾನದ ಪರಿಚ್ಛೇದ 19(1)(ಇ) ಪ್ರಕಾರ ಭಾರತದ ಯಾವುದೇ ಪ್ರದೇಶದಲ್ಲಿ ವಾಸಿಸುವ ಹಾಗೂ ನೆಲೆಸುವ ಮೂಲಭೂತ ಹಕ್ಕಿನ ಉಲ್ಲಂಘನೆ ಯಾಗುವುದಿಲ್ಲ’ ಎಂದು ನ್ಯಾ| ಸುಜಾತ ಅವರು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
(ಸಾಂದರ್ಭಿಕ ಚಿತ್ರ)
