ಬೆಂಗಳೂರು (ಜ.21): ಬಿಜೆಪಿ ಹಿಂದಿ ಪ್ರೇಮಿ ಹಾಗೂ ಕನ್ನಡ ವಿರೋಧಿ ಆದ್ದರಿಂದ ಈ ಪಕ್ಷಕ್ಕೆ ಮತ ನೀಡಲ್ಲ. ಇದು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವಾರ್. ಫೇಸ್ ಬುಕ್, ಟ್ವಿಟ್ಟರ್ ಸೇರಿ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸರ್ವಜನಾಂಗದ ಶಾಂತಿಯ ತೋಟ  ಈ ರೀತಿಯ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಕನ್ನಡಪರ ಸಂಘಟನೆಗಳ ವಿರುದ್ಧ ಮಾತನಾಡುವ ಬಿಜೆಪಿಗೆ ನನ್ನ ಮತ ಇಲ್ಲ ಎಂಬ ಪೋಸ್ಟ್ ಗಳು ಹರಿದಾಡುತ್ತಿದೆ.

 ಈ ಹಿಂದಿನಿಂದಲೂ ಇದೇ ರೀತಿಯ ಹಣೆಪಟ್ಟಿಯನ್ನು ಬಿಜೆಪಿ ಪಡೆದಿದೆ ಅನ್ನೋದು ಅಷ್ಟೇ ಸತ್ಯ. ಹಿಂದುತ್ವದ ಅಜೆಂಡಾ ಇಟ್ಕೊಂಡಿರೋ ಬಿಜೆಪಿ ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತಿಲ್ಲ ಎಂಬ ಆರೋಪ ಪದೇ ಪದೇ ಕೇಳಿ ಬರ್ತಾನೆ ಇದೆ. ಇನ್ನು, ಕೆಲದಿನಗಳ ಹಿಂದಷ್ಟೇ ಶಿವಾಜಿ ಕುರಿತಾಗಿ ನಾರಾಯಣಗೌಡ ಹೇಳಿಕೆಯ ವಿರುದ್ಧ, ಕೆಲ ಫೇಸ್ಬುಕ್ ಪೇಜ್ ಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಂದಿನಿಂದ ಪರ ವಿರೋಧದ ಚರ್ಚೆಗಳು ಫೇಸ್ ಬುಕ್ ನಲ್ಲಿ ನಡೆಯುತ್ತಿದೆ.

ಈ ಹಿಂದೆ ವೆಂಕಯ್ಯ ಸಾಕಯ್ಯ ಎಂಬ ಆಂದೋಲನವನ್ನು ನಡೆಸಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಸ್ಪರ್ಧೆಯ ವಿರುದ್ಧ ಹರಿಹಾಯ್ದಿತ್ತು.  ಇದೇ ರೀತಿ ಮತ್ತೆ ಬಿಜೆಪಿ ವಿರೋಧಿ ಆಂದೋಲನ ಮತ್ತೆ ಶುರುವಾಗಿದ್ದು ಚುನಾವಣಾ ಸಮಯದಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಾಷ್ಟ್ರೀಯತೆಯನ್ನು ಸಮರ್ಥಿಸಿಕೊಳ್ಳಲು ಹೋಗಿ ಬಿಜೆಪಿಯ ಜಾಲತಾಣದ ಫಾಲೋವರ್ಸ್ ಕನ್ನಡದ ಹೋರಾಟವನ್ನೇ ಗೂಂಡಾಗಿರಿ ಎಂದು ಜರಿಯುತ್ತಿದ್ದರು.  ಇದೇ ಕಾರಣಕ್ಕೆ ಬಿಜೆಪಿ ವಿರುದ್ಧ ಇದೀಗ ಭಾಷಾ ವಾರ್ ಶುರುವಾಗಿದೆ.