ಶಿಕ್ಷಣ ಇಲಾಖೆಯು ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ವರ್ಗೀಕರಣ, ನೋಂದಣಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾನ್ಯತೆ, ನಿಯಂತ್ರಣ, ಪಠ್ಯ ವಸ್ತು ನಿಗದಿಪಡಿಸುವಿಕೆ) ತಿದ್ದುಪಡಿ ನಿಯಮಗಳ 2017 ಕರಡು ಪ್ರತಿ ಬಿಡುಗಡೆ ಮಾಡಿದ್ದು, ಮಕ್ಕಳ ರಕ್ಷಣೆ, ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದೆ.

ಬೆಂಗಳೂರು (ಜ.07): ಶಿಕ್ಷಣ ಇಲಾಖೆಯು ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ವರ್ಗೀಕರಣ, ನೋಂದಣಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾನ್ಯತೆ, ನಿಯಂತ್ರಣ, ಪಠ್ಯ ವಸ್ತು ನಿಗದಿಪಡಿಸುವಿಕೆ) ತಿದ್ದುಪಡಿ ನಿಯಮಗಳ 2017 ಕರಡು ಪ್ರತಿ ಬಿಡುಗಡೆ ಮಾಡಿದ್ದು, ಮಕ್ಕಳ ರಕ್ಷಣೆ, ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದೆ.

ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳಗಳ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಭದ್ರತೆಗೆ ಹೆಚ್ಚಿನ ಮಹತ್ವ ನೀಡುವುದು, ಪೋಕ್ಸೋ ಕಾಯ್ದೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕುರಿತ ಅಂಶಗಳಿಗೆ ಹೆಚ್ಚಿನ ಒತ್ತು ನೀಡಿದೆ. ಶಾಲೆಗಳ ಮಾನ್ಯತೆಗಾಗಿ ನಿಗದಿ ಪಡಿಸಿದ್ದ ಭೂಮಿ ಅಳತೆಯ ಮಿತಿ ಕಡಿಮೆಗೊಳಿಸಿದೆ.

ಕರಡು ಪ್ರತಿಯಲ್ಲಿ ನೂತನವಾಗಿ ಶಾಲೆ ಪ್ರಾರಂಭಿಸಲು ಅರ್ಜಿ ಸಲ್ಲಿಸುವುದಕ್ಕೆ ಇರಬೇಕಾದ ಮೂಲಭೂತ ಸೌಕರ್ಯ, ಶಾಲೆಗಳು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ರೂಪಿಸಿದೆ. 1995 ನಿಯಮಗಳಿಗೆ 2017ರಲ್ಲಿ ತಿದ್ದುಪಡಿ ತಂದು ಕರಡು ಪ್ರತಿ ಪ್ರಕಟಿಸಿದೆ. ಹೊಸ ತಿದ್ದುಪಡಿ ನಿಯಮದ ಪ್ರಕಾರವಾಗಿ ರಾಜ್ಯದಲ್ಲಿರುವ ಎಲ್ಲ ಶಾಲೆಗಳು ಸಾಮಾಜಿಕ ಜಾಲತಾಣ ಮತ್ತು ವಯಸ್ಕರ ತಾಣಗಳನ್ನು ಬ್ಲಾಕ್ ಮಾಡುವಂತೆ ಅದೇಶಿಸಿದೆ. ವಿದ್ಯಾರ್ಥಿಗಳು ಕಂಪ್ಯೂಟರ್ ಬಳಕೆ ಮಾಡುವಾಗ ಅವರ ಮೇಲೆ ನಿಗಾ ವಹಿಸುವಂತೆಯೂ ತಿಳಿಸಿದೆ.

ಶೌಚಾಲಯ ತಾರತಮ್ಯ: ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು ಎಂಬ ಅಂಶವನ್ನು ತಿಳಿಸಿದೆ. ಆದರೆ, ಬಾಲಕರ ಶೌಚಾಲಯ ಕಡ್ಡಾಯಗೊಳಿಸಿ ಬಾಲಕಿಯರ ಶೌಚಾಲಯ ಅಗತ್ಯಕ್ಕೆ ಅನುಸಾರವಾಗಿ ಇರಬೇಕೆಂದು ತಿಳಿಸಿದೆ. ಬಾಲಕಿಯರ ಶೌಚಾಲಯ ಕಡ್ಡಾಯಗೊಳಿಸಬೇಕಿದ್ದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.

ನೋಂದಣಿ ನಿಯಮ: ಯಾವ ಹಂತದ ಶಾಲೆಗಳು ಎಷ್ಟು ವಿಸ್ತೀರ್ಣ ಇರಬೇಕೆಂದು ಕರಡಿನಲ್ಲಿ ಸ್ಪಷ್ಟಪಡಿಸಲಾಗಿದೆ.ಪೂರ್ವ ಪ್ರಾಥಮಿಕ- ಬಿಬಿಎಂಪಿ, ಇತರೆ ನಗರಸಭೆ - 2 ಸಾವಿರ ಚದರ ಮೀಟರ್, ಇತರೆ ಪ್ರದೇಶದಲ್ಲಿ 4 ಸಾವಿರ ಚದರ ಮೀಟರ್ ಇರಬೇಕು. ಪ್ರಾಥಮಿಕ- ಬಿಬಿಎಂಪಿ, ಇತರೆ ನಗರಸಭೆ – 1500 ಚದರ ಮೀಟರ್, ಇತರೆ ಪ್ರದೇಶದಲ್ಲಿ 3 ಸಾವಿರ ಚದರ ಮೀಟರ್ ಇರಬೇಕು. ಪ್ರೌಢಶಾಲೆ- ಬಿಬಿಎಂಪಿ, ನಗರಸಭೆ - 1 ಸಾವಿರ ಚದರ ಮೀಟರ್, ಇತರೆ ಪ್ರದೇಶದಲ್ಲಿ 2 ಸಾವಿರ ಚದರ ಮೀಟರ್ ಇರಬೇಕು. ನೋಂದಣಿ ಶುಲ್ಕ ಮತ್ತು ಪ್ರಕ್ರಿಯೆ ಶುಲ್ಕ ಕ್ರಮವಾಗಿ 25 ಮತ್ತು 10 ಸಾವಿರದಿಂದ ಪ್ರಾರಂಭವಾಗಿ ತರಗತಿಗಳ ಆಧಾರದ ಮೇಲೆ 1 ಲಕ್ಷ ಹಾಗೂ 20 ಸಾವಿರದ ವರೆಗೂ ನಿಗದಿ ಪಡಿಸಿದೆ.