ನಟ ಉಪೇಂದ್ರ ಅವರ ರಾಜಕೀಯ ಪರ್ವಕ್ಕೆ ಇಲ್ಲಿಯವರೆಗೂ 30  ಸಾವಿರ ಮಿಂಚಂಚೆಗಳು ಬಂದಿದ್ದು, ದಿನದಿನಕ್ಕೂ ಇದರ ಸಂಖ್ಯೆ ಹೆಚ್ಚಾಗುತ್ತಿದೆ. ಉಪೇಂದ್ರ ಅವರು ರಾಜಕೀಯ ಪಕ್ಷ ಶುರು ಮಾಡುವುದಾಗಿ ಹೇಳಿದ ಮೂರು ದಿನದ ಅವಧಿಯಲ್ಲೇ ಸಾವಿರಾರು ಇ-ಮೇಲ್‌ಗಳು ಬಂದಿವೆ. 

ಬೆಂಗಳೂರು (ಆ.15): ನಟ ಉಪೇಂದ್ರ ಅವರ ರಾಜಕೀಯ ಪರ್ವಕ್ಕೆ ಇಲ್ಲಿಯವರೆಗೂ 30 ಸಾವಿರ ಮಿಂಚಂಚೆಗಳು ಬಂದಿದ್ದು, ದಿನದಿನಕ್ಕೂ ಇದರ ಸಂಖ್ಯೆ ಹೆಚ್ಚಾಗುತ್ತಿದೆ. ಉಪೇಂದ್ರ ಅವರು ರಾಜಕೀಯ ಪಕ್ಷ ಶುರು ಮಾಡುವುದಾಗಿ ಹೇಳಿದ ಮೂರು ದಿನದ ಅವಧಿಯಲ್ಲೇ ಸಾವಿರಾರು ಇ-ಮೇಲ್‌ಗಳು ಬಂದಿವೆ. 

ಸಲಹೆ, ಸೂಚನೆ, ಉಪೇಂದ್ರ ಅವರ ರಾಜಕೀಯ ಪಕ್ಷ ಹೇಗಿರಬೇಕು, ಅದರ ಉದ್ದೇಶಗಳ ಕುರಿತು ಹೀಗೆ ಬೇರೆ ಬೇರೆ ರೀತಿಯ ಇ-ಮೇಲ್‌ಗಳು ಬರುತ್ತಿವೆ. ಅಲ್ಲದೆ ಸ್ವಯಂ ಪ್ರೇರಿತರಾಗಿ ಪಕ್ಷ ಸೇರಿಕೊಳ್ಳುವುದಾಗಿಯೂ ಹೇಳಿ ಕೆಲವರು ಇ-ಮೇಲ್ ಮಾಡಿದರೆ, ಮತ್ತಷ್ಟು ಮಂದಿ ಪಕ್ಷದಲ್ಲಿ ಕಾರ್ಯಕರ್ತರಾಗಿ ದುಡಿಯುವುದಕ್ಕೆ ಮುಂದೆ ಬಂದಿದ್ದಾರೆ. ಇನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ದೇಶಗಳಿಂದ ಬರುತ್ತಿರುವ ಇ-ಮೇಲ್‌ಗಳನ್ನು ನೋಡಿ ಅವುಗಳನ್ನು ಪ್ರತ್ಯೇಕವಾಗಿ ತೆಗೆದಿಡುವುದಕ್ಕಾಗಿಯೇ ನಾಲ್ಕೈದು ಮಂದಿ ಉಪೇಂದ್ರ ಅವರ ಆಪ್ತರ ತಂಡ ಕಳೆದ ಮೂರು ದಿನಗಳಿಂದ ಕೆಲಸ ಮಾಡುತ್ತಿದೆ. ‘ಕರ್ನಾಟಕ ಸೇರಿದಂತೆ ಆಂಧ್ರ, ತಮಿಳುನಾಡು ಹಾಗೂ ಹೊರ ದೇಶಗಳಾದ ಅಮೆರಿಕ, ಜರ್ಮನಿ ಹೀಗೆ ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ ಅಲ್ಲಿಂದ ನಮಗೆ ಇ-ಮೇಲ್‌ಗಳು ಬರುತ್ತಿವೆ. ಮೂರು ಇ-ಮೇಲ್ ಐಡಿಗಳನ್ನು ಕೊಡಲಾಗಿದ್ದು, ಮೂರಕ್ಕೂ ೩೦ ಸಾವಿರ ಸಂದೇಶಗಳು ಬಂದಿವೆ. ಅಲ್ಲದೆ ೬೦೦ಕ್ಕೂ ಹೆಚ್ಚು ಕೊರಿಯರ್‌ಗಳು ಬಂದಿವೆ’ ಎಂದು ಉಪೇಂದ್ರ ಅವರ ಆಪ್ತ ಶ್ರೀರಾಮ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. 

ಉಪೇಂದ್ರ ಅವರ ಸ್ವಾತಂತ್ರ್ಯ ಸಂದೇಶ

ಸ್ವಾತಂತ್ರ್ಯ ಅಂದರೆ ಬಿಡುಗಡೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ.

ಈಗ ನಮ್ಮೊಳಗಿನ ಅಪನಂಬಿಕೆ, ಅನುಮಾನ, ಅಲಸ್ಯದಿಂದ ನಮಗೆ ಬಿಡುಗಡೆ ಬೇಕಾಗಿದೆ. 

ಹಣ, ತೋಳ್ಬಲ, ಜಾತಿ ವರ್ಗಗಳಿಂದ ಮುಕ್ತವಾದ ಪ್ರಜಾಕೀಯ ಪಕ್ಷ ಉದಯವಾಗಬೇಕಿದೆ.

ಐಡಿಯಾ ಓಕೆ ಆದರೆ. ಈ ಆದರೆ ಎಂಬ ಪದವನ್ನು ಕಿತ್ತೆಸೆಯೋಣ. ಆಗಿಯೇ ಆಗುತ್ತದೆ ಎಂದು ನಂಬೋಣ.

ನಂಬಿಕೆಯೇ ಶಕ್ತಿ, ನಂಬಿಕೆಯೇ ಬಲ, ನಂಬಿಕೆಯೇ ಜೀವನ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಹೀಗೆ ಸ್ವಾತಂತ್ರ್ಯೋತ್ಸವದ ದಿನಾಚರಣೆಗೆ ತಮ್ಮ ಟ್ವೀಟರ್‌ನಲ್ಲಿ ಶುಭಾಶಯ ಕೋರುವ ಮೂಲಕ ಉದ್ದೇಶಿತ

ಪ್ರಜಾಕೀಯ ಪಕ್ಷ ಉದಯವಾಗುವ ಬಗ್ಗೆ ಗಟ್ಟಿ ಸೂಚನೆ ಕೊಟ್ಟಿದ್ದಾರೆ.