ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗವು ಇದನ್ನು ‘ಅತ್ಯಂತ ವಿಶಿಷ್ಟ ಯೋಜನೆ’ ಎಂದು ಕರೆದಿದೆ.
ವಾಷಿಂಗ್ಟನ್(ಜ.27): ಭಾರತವೆಂದರೆ ಹಾವಾಡಿಗರ ದೇಶವೆಂದು ಹೀಗಳೆಯುತ್ತಿದ್ದ ದೇಶವೊಂದು ಇದೀಗ ತನ್ನ ದೇಶದ ಹಾವನ್ನು ಹಿಡಿಯಲು ಭಾರತೀಯರ ಮೊರೆ ಹೋಗಿದೆ.
ಹೌದು ಅಮೆರಿಕದ ಫ್ಲೋರಿಡಾದಲ್ಲಿ ಬರ್ಮಾ ಹೆಬ್ಬಾವುಗಳ ಕಾಟ ತೀರಾ ವಿಪರೀತವಾಗಿದೆಯಂತೆ. ಇವುಗಳಿಂದಾಗಿ ಫ್ಲೋರಿಡಾದಲ್ಲಿನ ಸಣ್ಣಪುಟ್ಟ ಸಸ್ತನಿಗಳು ವಿನಾಶದಂಚಿಗೆ ಹೋಗುತ್ತಿವೆ. ಹೀಗಾಗಿ ಹೆಬ್ಬಾವುಗಳನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ಸಸ್ತನಿಗಳೇ ಇಲ್ಲವಾಗಿ ಹೋಗಬಹದು ಎಂಬ ಭೀತಿ ವನ್ಯಜೀವಿ ಅಧಿಕಾರಿಗಳನ್ನು ಕಾಡತೊಡಗಿದೆ.
ಹೀಗಾಗಿ ಅಮೆರಿಕವು ತಮಿಳುನಾಡಿನ ಇರುಳ ಬುಡಕಟ್ಟು ಜನಾಂಗಕ್ಕೆ ಸೇರಿದ ಮಾಸಿ ಸದಯ್ಯನ್, ವೈದಿವೇಲ್ ಗೋಪಾಲ್ ಹಾಗೂ ಇಬ್ಬರು ಅನುವಾದಕರನ್ನು ವನ್ಯಜೀವಿ ಇಲಾಖೆ ಕರೆಸಿಕೊಂಡಿದೆ. ಇವರಿಗೆ ಬರೋಬ್ಬರಿ 68,888 ಡಾಲರ್ ಹಣ ಪಾವತಿ ಮಾಡಿದೆ. ಇವರು ಫೆಬ್ರವರಿ ಪೂರ್ತಿ ಅವರು ಫ್ಲೋರಿಡಾದಲ್ಲೇ ಇರಲಿದ್ದಾರೆ.
8 ದಿನದಲ್ಲಿ 13 ಹೆಬ್ಬಾವು:
ಹೆಬ್ಬಾವು ಪತ್ತೆ ಶ್ವಾನಗಳ ಸಹಾಯದಿಂದ ಇವರು ಬೃಹತ್ ಹಾವುಗಳನ್ನು ಪತ್ತೆಹಚ್ಚಿ, ಅವುಗಳನ್ನು ಹಿಡಿಯುವ ಕೆಲಸ ಆರಂಭಿಸಿದ್ದಾರೆ. ಕೇವಲ 8 ದಿನಗಳಲ್ಲಿ 13 ಹೆಬ್ಬಾವುಗಳನ್ನು ಹಿಡಿಯುವ ಮೂಲಕ ಅವರು ಫ್ಲೋರಿಡಾದ ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದ್ದಾರೆ. ಕ್ರೊಕೊಡೈಲ್ ಲೇಕ್ ನ್ಯಾಷನಲ್ ವೈಲ್ಡ್'ಲೈಫ್ ರೆಫ್ಯೂಜ್'ನ ಮೊದಲ ದಿನದ ಭೇಟಿಯಲ್ಲೇ 4 ಹಾವುಗಳು ಇವರ ಕೈಗೆ ಸಿಕ್ಕಿವೆ. ಇವರು ಹಿಡಿದ ಹೆಬ್ಬಾವುಗಳ ಪೈಕಿ 16 ಅಡಿ ಉದ್ದದ ಹಾವು ಕೂಡ ಸೇರಿದೆ. ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗವು ಇದನ್ನು ‘ಅತ್ಯಂತ ವಿಶಿಷ್ಟ ಯೋಜನೆ’ ಎಂದು ಕರೆದಿದೆ.
