Asianet Suvarna News Asianet Suvarna News

ರಾಹುಲ್ ವಿರುದ್ಧ ಅಮೇಥಿಯಲ್ಲಿ ಗೆಲ್ತಾರಂತೆ ಸ್ಮೃತಿ ಇರಾನಿ!

ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದೆ. ರಫೇಲ್‌ ಒಪ್ಪಂದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರ ವಿರುದ್ಧ ರಾಹುಲ್‌ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ರಾಹುಲ್‌ರ ಕಡು ವೈರಿಯೆಂದೇ ಬಿಂಬಿತರಾಗಿರುವ ಕೇಂದ್ರ ಸರ್ಕಾರದ ಪ್ರಭಾವಿ ಮಂತ್ರಿ ಈ ಕುರಿತು ಟೈಮ್ಸ್‌ ನೌ ಸಂದರ್ಶನದಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

Smriti Irani contest from Amethi in Loksabha Election 2019
Author
Bengaluru, First Published Sep 28, 2018, 5:38 PM IST

ನವದೆಹಲಿ (ಸೆ. 28): ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದೆ. ರಫೇಲ್‌ ಒಪ್ಪಂದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರ ವಿರುದ್ಧ ರಾಹುಲ್‌ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ರಾಹುಲ್‌ರ ಕಡು ವೈರಿಯೆಂದೇ ಬಿಂಬಿತರಾಗಿರುವ ಕೇಂದ್ರ ಸರ್ಕಾರದ ಪ್ರಭಾವಿ ಮಂತ್ರಿ ಈ ಕುರಿತು ಟೈಮ್ಸ್‌ ನೌ ಸಂದರ್ಶನದಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

ಕೆಲವು ದಿನಗಳಿಂದ ಮೌನವಾಗಿದ್ದೀರಿ, ಜನ ಆಶ್ಚರ್ಯಚಕಿತರಾಗಿದ್ದಾರೆ.

ಬಿರುಗಾಳಿಗೂ ಮುನ್ನ ಯಾವಾಗಲೂ ನಿಶ್ಶಬ್ದವೇ ಇರುತ್ತದೆ. ಆ ಬಿರುಗಾಳಿ 2019ರಲ್ಲಿ ಬೀಸಲಿದೆ.

ನಿಮ್ಮ ಮುಂದಿನ ಯುದ್ಧ ರಾಹುಲ್‌ ಗಾಂಧಿ ವಿರುದ್ಧ?

ನನಗೆ ಮುಂದಿನ ಚುನಾವಣೆ ಯುದ್ಧ ಅಲ್ಲ. ಅದೊಂದು ಸೈದ್ಧಾಂತಿಕ ಪೊಸಿಶನ್‌. ಅದನ್ನು ನಾನು ಈಗಾಗಲೇ ಅಮೇಥಿಯಲ್ಲಿ ಪಡೆದಿದ್ದೇನೆ. ಕೆಲವರು ಕುಟುಂಬ ರಾಜಕಾರಣದ ಹಿನ್ನೆಲೆಯನ್ನೇ ಉಪಯೋಗಿಸಿಕೊಂಡು ಜನರಿಂದ ಮತ ಪಡೆದು ರಾಜಕೀಯ ಮಾಡುತ್ತಾರೆ. ಮತ್ತೆ ಮುಂದಿನ 5 ವರ್ಷಗಳ ಕಾಲ ಜನರನ್ನೇ ಮರೆತುಬಿಡುತ್ತಾರೆ.

ಹಾಗಾಗಿಯೇ 2014ರಲ್ಲಿ ಅಮೇಥಿಯ ಜನರಿಗೆ ‘ನಾನು ಮತ್ತೆ ಇಲ್ಲಿಗೆ ಬರುತ್ತೇನೆ, ರಾಹುಲ್‌ ಗಾಂಧಿ ಕೂಡ ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ’ ಎಂದು ಹೇಳಿದ್ದೆ. ಅದಾದ ಬಳಿಕ ರಾಹುಲ್‌ ಗಾಂಧಿ ಕೂಡ ಅನೇಕ ಬಾರಿ ಅಮೇಥಿಗೆ ಭೇಟಿ ನೀಡಿದ್ದಾರೆ.

ಬಹುತೇಕ ಬಾರಿ ಅದು ಪತ್ರಿಕಾಗೋಷ್ಠಿ ಕರೆಯಲು. ಕಾರಣ ಇಷ್ಟೆ, ಅಲ್ಲಿನ ಜನ ಅವರನ್ನು ಮರೆಯಬಾರದೆಂದು. ಅಂದರೆ ನನ್ನ ಆಯ್ಕೆ ಕಳೆದ ನಾಲ್ಕೂವರೆ ವರ್ಷಗಳಿಂದ ರಾಹುಲ್‌ ಗಾಂಧಿ ಪದೇ ಪದೇ ಅಮೇಥಿಗೆ ಭೇಟಿ ನೀಡುವಂತೆ ಮಾಡಿತು.

ಕಳೆದ ನಾಲ್ಕು ವರ್ಷದಲ್ಲಿ ಸಚಿವರಾಗಿ, ಬಿಜೆಪಿಯ ಪ್ರಮುಖ ವಕ್ತಾರೆಯಾಗಿ ಕೆಲಸ ಮಾಡಿದ್ದೀರಿ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್‌ ಬೆಲೆ ಏರಿಕೆ, ಭ್ರಷ್ಟಾಚಾರ ಮುಂತಾದ ವಿಷಯಗಳ ಕುರಿತಾಗಿ ಆರೋಪ ಮಾಡಿದ್ದಿರಿ. ಈಗ..?

ಅವರ ಆಡಳಿತ ಸಂಪೂರ್ಣ ಅದಕ್ಷತೆಯಿಂದ ಕೂಡಿತ್ತು. ಅದು ಸಾಬೀತಾಗಿತ್ತು. ಅವರು ಭ್ರಷ್ಟಾಚಾರ ಮಾಡಿದ್ದರು. ಅದು ನ್ಯಾಯಾಲಯದಲ್ಲಿ ತನಿಖೆಯಾಗುತ್ತಿತ್ತು. ಪುರಾವೆಗಳೂ ಇದ್ದವು. ಕಳೆದ ನಾಲ್ಕೂವರೆ ವರ್ಷದಿಂದ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ ಎಂದು ನೀವು ಹೇಳುತ್ತೀರಿ. ಆದರೆ ನಾನು ನ್ಯಾಯಾಲಯದ ತನಿಖೆ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಾಸ್ತವ ಏನೆಂದರೆ ಕಾಂಗ್ರೆಸ್‌ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗೆ ಓಡಾಡುತ್ತಿದ್ದಾರೆ.

ನ್ಯಾಯಾಲಯವೇ ಅವರಿಗೆ ಜಾಮೀನು ನೀಡಿದೆ. ಅದೇನು ಬಿಜೆಪಿ ನೀಡಿದ್ದಲ್ಲ, ಸರ್ಕಾರ ನೀಡಿದ್ದಲ್ಲ. ಇದು ಕಾಂಗ್ರೆಸ್‌ ಹೇಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದರ ಉದಾಹರಣೆಯಷ್ಟೆ. ಇನ್ನೂ ಹಲವಾರು ಅಂಶಗಳಲ್ಲಿ ಕಾಂಗ್ರೆಸ್‌ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ.

ಮೂಲಭೂತ ಸೌಕರ್ಯವಾದ ಶೌಚಾಲಯ ನಿರ್ಮಾಣ, ರಸಗೊಬ್ಬರ ಸಬ್ಸಿಡಿ ಹೀಗೆ ಸಾಕಷ್ಟುವಿಷಯಗಳಲ್ಲಿ ಕಾಂಗ್ರೆಸ್‌ ಸೋತಿದೆ. ಈ ಎಲ್ಲಾ ಅದಕ್ಷತೆಯ ವಿರುದ್ಧ ಧ್ವನಿ ಎತ್ತುವುದು ಅನಿವಾರ್ಯವಾಗಿತ್ತು.

ಆದರೆ ಅದೇ ರೀತಿಯ ಆರೋಪಗಳು ರಫೇಲ್‌ ಹಗರಣದಲ್ಲಿ ಈಗ ನಿಮ್ಮ ಮನೆ ಬಾಗಿಲಿಗೆ ಬಂದಿವೆಯಲ್ಲಾ?

ಕಾಂಗ್ರೆಸ್‌ನ ಎಲ್ಲ ಭ್ರಷ್ಟಾಚಾರಗಳು, ಹಗರಣಗಳು ಸಾರ್ವಜನಿಕವಾಗಿ ಚರ್ಚೆಗೊಳಪಟ್ಟಿವೆ. ಬಹುತೇಕ ರಾಜಕೀಯ ಚಳವಳಿಗಳು ನಡೆದಿರುವುದು ಯುಪಿಎ-2 ಅವಧಿಯಲ್ಲಿ. ಇನ್ನು ರಫೇಲ್‌ ಡೀಲ್‌ ಕುರಿತಾಗಿ ನಮ್ಮ ರಕ್ಷಣಾ ಸಚಿವರು, ವಿತ್ತ ಸಚಿವರು, ಅಲ್ಲದೆ ಫ್ರಾನ್ಸ್‌ ಸರ್ಕಾರ ಕೂಡ ಮೇಲಿಂದ ಮೇಲೆ ಈ ಕುರಿತು ವಿವರಣೆ ನೀಡುತ್ತಲೇ ಬಂದಿದೆ. ಡಸಾಲ್ಟ್‌ ಕೂಡ ಹೇಳಿಕೆ ನೀಡಿದೆ.

ಫ್ರಾನ್ಸ್‌ ಹಣಕಾಸು ಸಚಿವರು ವಿರೋಧ ಪಕ್ಷದ ಅಧ್ಯಕ್ಷರಿಗೆ 15 ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ರಾಹುಲ್‌ ಗಾಂಧಿ ಇದುವರೆಗೂ ಉತ್ತರ ನೀಡಿಲ್ಲ. ಯಾಕೆ? ಏಕೆಂದರೆ, ಇಡೀ ಪ್ರಕ್ರಿಯೆ ‘ಹೊಡೆದು ಓಡುವ’ ರಾಜಕಾರಣದ ಭಾಗ ಎಂದು ರಾಹುಲ್‌ ಗಾಂಧಿ ಭಾವಿಸಿದ್ದಾರೆ. ರಾಹುಲ್‌ ಪ್ರಶ್ನೆ ಕೇಳುತ್ತಾರೆ. ಕಾರಣ ವಿರೋಧ ಪಕ್ಷದ ನಾಯಕನ ಸ್ಥಾನ ಉಳಿಸಿಕೊಳ್ಳಬೇಕಾದ ದುರ್ದು ಅವರಿಗಿದೆ.

ನೀವು, ಶರದ್‌ ಪವಾರ್‌, ಮಾಯಾವತಿ, ಮಮತಾ ಬ್ಯಾನರ್ಜಿ ಅವರ ಬಳಿ ಹೋಗಿ ರಾಹುಲ್‌ ಗಾಂಧಿಯನ್ನು ವಿರೋಧ ಪಕ್ಷದ ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೀರಾ ಎಂದು ಕೇಳಿ. ಅವರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಬ್ಬ ನಾಯಕನಾಗಿ ಎನ್‌ಡಿಎ ಸಂಪೂರ್ಣವಾಗಿ ಒಪ್ಪಿಕೊಂಡಿದೆ. ಹಾಗಾಗಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷನಾಗಿ ಕೆಲವೊಂದು ವಿಷಯಗಳನ್ನು ಎತ್ತಿ ತಮ್ಮನ್ನು ತಾವು ಎತ್ತರಕ್ಕೇರಿಸಿಕೊಳ್ಳಬೇಕಾದ ಅನಿವಾರ್ಯತೆ ಅವರಿಗಿದೆ.

ಎನ್‌ಡಿಎಯಿಂದ ಚಂದ್ರಬಾಬು ನಾಯ್ಡು ಹೊರಬಂದಿದ್ದಾರೆ. ಇನ್ನು ಶಿವಸೇನೆ ಪ್ರತಿದಿನ ನಿಮ್ಮನ್ನೇ ಅಣಕಿಸುತ್ತಿದೆ. ಎನ್‌ಡಿಎ ಛಿದ್ರವಾಗಿದೆಯಲ್ಲವೇ?

ಶಿವಸೇನೆಯೊಂದಿಗೆ ನಾನು 15-18 ವರ್ಷ ಕೆಲಸ ಮಾಡಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಕ್ಕೂಟ ಸರ್ವೇಸಾಮಾನ್ಯ. ಚಂದ್ರಬಾಬು ನಾಯ್ಡು ಹೊರನಡೆದಿರುವ ಬಗ್ಗೆ, ಉದ್ಧವ್‌ ಠಾಕ್ರೆ ಹೇಳಿಕೆಗಳ ಬಗ್ಗೆ ಇನ್ನೇನನ್ನೋ ಅರ್ಥೈಸುವ ಅಗತ್ಯ ಇಲ್ಲ. ಅವರು ಅವರ ರಾಜಕೀಯ ಅಸ್ತಿತ್ವದ ಪ್ರಶ್ನೆ ಎದುರಾದಾಗ ಹಾಗೆ ಮಾಡುತ್ತಾರೆ. ರಾಜಕೀಯದಲ್ಲಿ ನಿಶ್ಚಿತತೆ ಬೇಕು. ಇಲ್ಲಿ ಯಾರೂ ಯಾರ ಬಗ್ಗೆಯೂ ಕೆಸರೆರಚಾಟ ನಡೆಸಿಲ್ಲ.

ನೀವೂ ವಿರೋಧ ಪಕ್ಷದಲ್ಲಿದ್ದಾಗ ಪ್ರತಿ ಬಾರಿ ತೈಲ ಬೆಲೆ ಏರಿಕೆಯಾದಾಗಲೂ ಬೀದಿಯಲ್ಲಿ ಸಿಲಿಂಡರ್‌ ಗ್ಯಾಸ್‌ ಹಿಡಿದು ಪ್ರತಿಭಟನೆ ಮಾಡಿಲ್ಲವೇ?

ರಾಹುಲ್‌ ಗಾಂಧಿ 9 ಸಿಲಿಂಡರ್‌ ಮತ್ತು 10 ಸಿಲಿಂಡರ್‌ ವಿಷಯಕ್ಕೆ ಪ್ರತಿಭಟನೆಗೆ ಮುಂದಾಗಿದ್ದರು. ಯುಪಿಎ-2 ಅವಧಿಯಲ್ಲಿ ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಹುದ್ದೆಯಲ್ಲಿರದೆ ಪ್ರಧಾನಮಂತ್ರಿಯ ಪಕ್ಕದಲ್ಲಿ ಕುಳಿತಿದ್ದರು. ಅವರು ಆಗ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರಲಿಲ್ಲ. ಆದರೆ ಕುಟುಂಬದ ಕುಡಿ ಎಂಬ ಕಾರಣಕ್ಕಾಗಿ ಅಲ್ಲಿ ಕುಳಿತಿದ್ದರು. ಅವರು ಪ್ರಧಾನಮಂತ್ರಿಗೆ ಸಲಹೆ ನೀಡುತ್ತಿದ್ದರು. ಅದರ ವಿರುದ್ಧ ನಾನು ಪ್ರತಿಭಟಿಸಿದ್ದೆ. ಕಾರಣ ಭಾರತದ ಪ್ರಜಾಪ್ರಭುತ್ವ ಚಾಕೋಲೇಟ್‌ ಅಲ್ಲ.

ಇವತ್ತು ಅವರು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಅವರಿಗೆ ಉತ್ತರ ಕೊಡಿ.

ಅವರು ರಸ್ತೆಯಲ್ಲಿ ಕುಳಿತುಕೊಳ್ಳಲೂ ಅರ್ಹರಲ್ಲ. ನೀವು ನಾನು ಸಿಲಿಂಡರ್‌ ಹಿಡಿದು ಪ್ರತಿಭಟಿಸಿದ್ದನ್ನು ಇವತ್ತೂ ಉಲ್ಲೇಖಿಸಿದ್ದೀರಿ ಎಂದರೆ ಅದರರ್ಥ ಅದು ಅಷ್ಟುಮಹತ್ವದ್ದು ಎಂದು. ಅದೇ ರಾಹುಲ್‌ ಗಾಂಧಿ ಹೀಗೆ ಮಾಡಲು ಸಾಧ್ಯವಿಲ್ಲ. ಅವರಿಗೆ ಜನ ಕೂಡ ಬೆಂಬಲ ನೀಡುವುದಿಲ್ಲ. ನಾನದನ್ನು ಅಮೇಥಿಯಲ್ಲಿ ಕಣ್ಣಾರೆ ಕಂಡಿದ್ದೇನೆ.

ಅವರು ಪ್ರತಿಭಟನೆಗೆ ಕರೆ ನೀಡಿದ್ದಾಗ ಅಂಗಡಿಗಳೆಲ್ಲಾ ತೆರೆದೇ ಇದ್ದವು. ತೈಲಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರಕ್ಕೂ ಕಾಳಜಿ ಇದೆ. ಈ ಬಗ್ಗೆ ಹಣಕಾಸು ಸಚಿವರು, ಪೆಟ್ರೋಲಿಯಂ ಸಚಿವರು ಹೇಳಿಕೆ ನೀಡಿದ್ದಾರೆ. ಪೆಟ್ರೋಲ್‌ ಡೀಸೆಲ್‌ ಜಿಎಸ್‌ಟಿ ಅಡಿಯಲ್ಲಿ ತರುವ ಅಗತ್ಯವಿದೆ. ಇದರಲ್ಲಿ ರಾಜ್ಯ ಸರ್ಕಾರಗಳ ಪಾಲೂ ಮಹತ್ವದ್ದು.

18 ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ನೀವು ಬೆಲೆ ಕಡಿಮೆ ಮಾಡಲು ಯಾಕೆ ಸಾಧ್ಯವಿಲ್ಲ?

ಬಿಜೆಪಿಯಲ್ಲಿ ಕಾಂಗ್ರೆಸ್‌ ಸರ್ಕಾರದಂತೆ ‘ಹೈಕಮಾಂಡ್‌’ ಸಂಪ್ರದಾಯ ಇಲ್ಲ. ಇನ್ನು ಬಿಜೆಪಿ ಸರ್ಕಾರ ಕೇವಲ ಒಂದು ಪಕ್ಷದ ಸರ್ಕಾರ ಅಲ್ಲ. ಅದು ಆ ರಾಜ್ಯಗಳ ಮುಖ್ಯಮಂತ್ರಿಯ ವಿವೇಚನೆಗೆ ಸಂಬಂಧಿಸಿದ್ದು. ಇನ್ನೊಂದೆಡೆ 18 ರಾಜ್ಯಗಳಲ್ಲಿ, ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ. ಆದರೆ ನಾವು ತೈಲ ಉತ್ಪಾದಕರಲ್ಲ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ನಿರ್ದೇಶಕರೂ ನಾವಲ್ಲ.

ಯುಪಿಎ ಸರ್ಕಾರದ ಅವಧಿಯಲ್ಲಿ ನಿಮಗೆ ಇದು ತಿಳಿದಿರಲಿಲ್ಲವೇ?

ಯುಪಿಎ ಅವಧಿಯಲ್ಲೂ ನಮಗೆ ಇದು ತಿಳಿದಿತ್ತು. ಆದರೆ ಕೇವಲ ತೈಲ ಮಾತ್ರವಲ್ಲ, ಬ್ಯಾಂಕಿಂಗ್‌ ವಲಯದಲ್ಲೂ ಯುಪಿಎ ಪ್ರತಿನಿಧಿಗಳು ಹಸ್ತಕ್ಷೇಪ ಮಾಡುತ್ತಿದ್ದರು. ನಾವು ಅದರ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದೆವು. ನಮ್ಮ ಹೋರಾಟಕ್ಕೆ ಜನರೂ ಬೆಂಬಲ ನೀಡಿದ್ದರು. ಅದೇ ಕಾರಣಕ್ಕಾಗಿ 2014ರಲ್ಲಿ ನಾವು ಅಧಿಕಾರಕ್ಕೆ ಬಂದೆವು. ಆದರೆ ಇಂದು ರಾಹುಲ್‌ ಗಾಂಧಿ ಅವರ ಮಾತಿಗೆ ದೇಶದ ಜನತೆ ಬೆಂಬಲ ನೀಡುತ್ತಿಲ್ಲ.

ತಳಮಟ್ಟದ ಜನರೊಂದಿಗಿನ ಸಂಪರ್ಕವನ್ನು ನೀವು ಕಳೆದುಕೊಂಡಿದ್ದೀರಿ ಎಂದು ರಾಹುಲ್‌ ಹೇಳುತ್ತಿದ್ದಾರಲ್ಲ?

ಕಾಂಗ್ರೆಸ್‌ 70 ವರ್ಷಗಳ ಕಾಲ ದೇಶವನ್ನು ಆಳಿದೆ. ಅದು ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿಲ್ಲ. ಜನರ ನಾಡಿಮಿಡಿತವನ್ನು ನಮ್ಮ ಸರ್ಕಾರ ಅರಿತಿದೆ. ಅದಕ್ಕಾಗಿಯೇ ನರೇಂದ್ರ ಮೋದಿ ಉಜ್ವಲಾ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಕೇವಲ ಮೂರೂವರೆ ವರ್ಷದಲ್ಲಿ 5 ಕೋಟಿ ಜನರಿಗೆ ಸಿಲಿಂಡರ್‌ ಒದಗಿಸಿದ್ದಾರೆ.

9 ಕೋಟಿ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ನೀಡಲಾಗುತ್ತಿದೆ.

- ಸಂದರ್ಶನ

ಸ್ಮೃತಿ ಇರಾನಿ, ಜವಳಿ ಸಚಿವೆ 

 

Follow Us:
Download App:
  • android
  • ios