ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಸ್ಸೆಮ್ ಕೃಷ್ಣ, ಆ ಪಕ್ಷಕ್ಕೆ ಸಾಮುದಾಯಿಕ ಮುಖಂಡರು ಬೇಕಿಲ್ಲ ಎಂದು ಚಿವುಟಿದರು.

ಬೆಂಗಳೂರು(ಜ. 29): ತಮ್ಮ ಸೇವಾ ಹಿರಿತನಕ್ಕೆ ಬೆಲೆ ಇಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದರು. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಸ್ಸೆಮ್ ಕೃಷ್ಣ, ಯಾವ ರಾಜಕೀಯ ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಇಲ್ಲವೋ ಅಲ್ಲಿ ಕೆಲಸ ಮಾಡುವುದು ತರವಲ್ಲ ಎಂದು ಅಭಿಪ್ರಾಯಪಟ್ಟರು.

"ಕೆಲವರು 46ನೇ ವಯಸ್ಸಿನಲ್ಲೂ ವಯಸ್ಸಾದವರಂತೆ ವರ್ತಿಸಬಹುದು. ಕೆಲವರು 80 ವರ್ಷ ಗಡಿ ದಾಟಿದರೂ ಚುರುಕಾಗಿ ಓಡಾಡುತ್ತಾರೆ. ನನ್ನ ನಡೆದಾಟದಲ್ಲಿ ನಿಧಾನಗತಿ ಬಂದಿದೆ. ಅದು ವಯಸ್ಸಾದಂತೆ ಪ್ರಾಕೃತಿಕವಾಗಿ ಬರುವ ಬದಲಾವಣೆಯಷ್ಟೇ. ಇದನ್ನೇ ನೆವ ಮಾಡಿಕೊಂಡು ಸೈಡ್'ಲೈನ್ ಮಾಡುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ," ಎಂದು ಮಾಜಿ ಕೇಂದ್ರ ವಿದೇಶಾಂಗ ಸಚಿವರೂ ಆಗಿದ್ದ ಎಸ್.ಎಂ.ಕೃಷ್ಣ ನೋವು ವ್ಯಕ್ತಪಡಿಸಿದರು.

ಪಕ್ಷದ ಧೋರಣೆ ಬಗ್ಗೆ ಟೀಕೆ:
ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಸ್ಸೆಮ್ ಕೃಷ್ಣ, ಆ ಪಕ್ಷಕ್ಕೆ ಸಾಮುದಾಯಿಕ ಮುಖಂಡರು ಬೇಕಿಲ್ಲ ಎಂದು ಚಿವುಟಿದರು. "ಕಾಂಗ್ರೆಸ್ ಪಕ್ಷವು ಜನಸಮುದಾಯದ ಲೀಡರ್'ಗಳು ಬೇಕೋ ಬೇಡವೋ ಎಂಬ ಗೊಂದಲದಲ್ಲಿ ಸಿಕ್ಕಿಕೊಂಡಿದೆ. ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸುವಂಥ ಮ್ಯಾನೇಜರ್'ಗಳಿದ್ದರೆ ಸಾಕು, ಪಕ್ಷವನ್ನು ಮುಂದಕ್ಕೆ ನಡೆಸಬಹುದು ಎಂಬ ತೀರ್ಮಾನಕ್ಕೆ ಬಂದಿದಂತೆ ಅನಿಸುತ್ತಿದೆ" ಎಂದು ಕೃಷ್ಣ ಟೀಕಿಸಿದರು.

ಇದೇ ವೇಳೆ, ಕರ್ನಾಟಕದ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಲು ನಿರಾಕರಿಸುವ ಮೂಲಕ ಎಸ್.ಎಂ.ಕೃಷ್ಣ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದರು. ರಾಜೀನಾಮೆ ನೀಡುವ ಮೂಲಕ ತನ್ನ ಇರುವಿಕೆಯನ್ನು ಹೈಕಮಾಂಡ್'ಗೆ ತೋರಿಸಿದ್ದೇನೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.