ಬೆಂಗಳೂರು (ಜೂ. 22): ರಾಜ್ಯದಲ್ಲಿ ಮೂರ್ನಾಲು ದಿನದ ಬಳಿಕ ಮತ್ತೆ ಮುಂಗಾರು ದುರ್ಬಲವಾಗುವ ಸಾಧ್ಯತೆ ಇದ್ದು, ರೈತರಲ್ಲಿ ಆತಂಕ ಮೂಡಿದೆ.

ರಾಜ್ಯದಲ್ಲಿ ಇದೀಗ ಮುಂಗಾರು ಮಳೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಚುರುಕು ಕಾಣಿಸಿಕೊಂಡಿದೆ. ಜೂ.24 ವರೆಗೂ ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದರೆ, ಜೂ.24ರ ನಂತರ ಮುಂಗಾರು ಕ್ಷೀಣಿಸುವ ಲಕ್ಷಣಗಳು ಕಂಡುಬಂದಿದ್ದು, ರೈತರಲ್ಲಿ ಮತ್ತೆ ಆತಂಕ ಎದುರಾಗುವಂತಾಗಿದೆ.

ಈ ನಡುವೆ ಮುಂದಿನ ಮೂರು ದಿನ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ, ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್‌, ಕಲಬುರಗಿ, ರಾಯಚೂರು, ವಿಜಯಪುರ, ಬೆಳಗಾವಿ ಜಿಲ್ಲೆಯಲ್ಲಿ 65ರಿಂದ 115 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪ್ರಸ್ತುತ ಚುರುಕುಗೊಂಡಿರುವ ಮುಂಗಾರಿನಿಂದ ರಾಜ್ಯಾದ್ಯಂತ ಸರಾಸರಿ 50 ಮಿ.ಮೀ.ವರೆಗೆ ಮಳೆಯಾದರೆ ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಲಿದೆ. ಆದರೆ, ಜಲಾಶಯಗಳಿಗೆ ಒಳಹರಿವು ಬರುವ ಸಾಧ್ಯತೆ ಕಡಿಮೆ. ನಿರಂತರವಾಗಿ ಮಳೆಯಾದರೆ ಮಾತ್ರ ಜಲಾಶಯಗಳಿಗೆ ಉತ್ತಮ ಒಳಹರಿವು ಬರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.