ಬೆಂಗಳೂರು :  ಭಾರತೀಯ ವಿಜ್ಞಾನ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಸ್ಫೋಸಿಸ್‌ ಸೈನ್ಸ್‌ ಫೌಂಡೇಶನ್‌ ನೀಡುವ 2018ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ.

ಮಂಗಳವಾರ ಬೆಂಗಳೂರಿನ ಇಸ್ಫೋಸಿಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ ಫೌಂಡೇಶನ್‌ ಅಧ್ಯಕ್ಷ ಕೆ.ದಿನೇಶ್‌, ಒಟ್ಟು ಆರು ವಿಜ್ಞಾನ ವಿಭಾಗದಲ್ಲಿ ಗಣನೀಯ ಸಾಧನೆ ಮಾಡಿರುವ ಆರು ಮಂದಿ ಸಾಧಕರಿಗೆ 2019ರ ಜನವರಿ 5ರಂದು ನಗರದ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 

ಪ್ರಸಕ್ತ ವರ್ಷ ಪ್ರಶಸ್ತಿ ಮೊತ್ತವನ್ನು 65 ಲಕ್ಷ ರು.ದಿಂದ 72 ಲಕ್ಷ ರು.ಗೆ (1 ಲಕ್ಷ ಅಮೆರಿಕನ್‌ ಡಾಲರ್‌) ಹೆಚ್ಚಿಸಲಾಗಿದೆ. ಈ ನಗದು ಬಹುಮಾನ ತೆರಿಗೆ ಮುಕ್ತವಾಗಿರಲಿದೆ. ಜತೆಗೆ ಪುರಸ್ಕೃತರಿಗೆ ಚಿನ್ನದ ಪದಕ, ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ನ್ಯಾನೋ ವಿಜ್ಞಾನ ಮತ್ತು ತಾಂತ್ರಿಕ ಕೇಂದ್ರ ವಿಭಾಗದ ಅಧ್ಯಕ್ಷರಾದ ಧರ್ಮಸ್ಥಳ ಮೂಲದ ನವಕಾಂತ್‌ ಭಟ್‌ ಅವರನ್ನು ‘ಜೈವಿಕ ರಸಾಯನ ಶಾಸ್ತ್ರದಲ್ಲಿ ಬಯೋಸೆನ್ಸಾರ್‌ ಅಭಿವೃದ್ಧಿ’ ಹಾಗೂ ‘ಗ್ಯಾಸೋಯಸ್‌ ಸೆನ್ಸಾರ್‌ಗಳ ಅಭಿವೃದ್ಧಿ ಮೂಲಕ ಮೆಟಲ್‌ ಆಕ್ಸೈಡ್‌ ಸೆನ್ಸಾರ್‌’ ಸಂಶೋಧನೆಗೆ ‘ಇಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್‌’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ದೆಹಲಿಯ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಆಟ್ಸ್‌ರ್‍ ಅಂಡ್‌ ಏಸ್ತೆಟಿಕ್ಸ್‌ ವಿಭಾಗದ ಡೀನ್‌ ಕವಿತಾ ಸಿಂಗ್‌ ಅವರನ್ನು ‘ಮೊಗಲರ ಸಾಮ್ರಾಜ್ಯ, ರಜಪೂತರು ಮತ್ತು ಡೆಕ್ಕನ್‌ ಕಲೆ ಅಧ್ಯಯನ’ಕ್ಕೆ ‘ಮಾನವಿಕ ವಿಜ್ಞಾನ’ ಪ್ರಶಸ್ತಿಗೆ, ‘ಮಾಲಿಕ್ಯೂಲರ್‌ ಮೋಟರ್‌ ಪ್ರೊಟೀನ್ಸ್‌’ ಕ್ಷೇತ್ರದಲ್ಲಿ ಸಂಶೋಧನೆಗೆ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸಚ್‌ರ್‍ ಅಸೋಸಿಯೇಟ್‌ ಪ್ರೊಫೆಸರ್‌ ರೂಪ್‌ ಮಲ್ಲಿಕ್‌ ಅವರನ್ನು ‘ಜೀವ ವಿಜ್ಞಾನ’ ಪ್ರಶಸ್ತಿಗೆ, ಫ್ರಾನ್ಸ್‌ನ ಯೂನಿವರ್ಸಿಟಿ ಆಫ್‌ ಸ್ಟ್ರಾಸ್‌ಬರ್ಗ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌$್ಡ ಸ್ಟಡಿಯ ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷೆ ನಳಿನಿ ಅನಂತರಾಮನ್‌ ಅವರನ್ನು ‘ಕ್ವಾಂಟಮ್‌ ಕೆಯಾಸ್‌ ಸಂಶೋಧನೆ’ಗೆ ‘ಗಣಿತ ವಿಜ್ಞಾನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ವಾಯುಮಂಡಲ ಮತ್ತು ಸಾಗರ ವಿಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಎಸ್‌.ಕೆ.ಸತೀಶ್‌ ಅವರನ್ನು ‘ಹವಾಮಾನ ವೈಪರೀತ’ ಕುರಿತು ಸಂಶೋಧನೆಗೆ ‘ಭೌತ ವಿಜ್ಞಾನ’ ಪ್ರಶಸ್ತಿಗೆ , ‘ಬಿಹೇವಿಯರಲ್‌ ಎಕಾನಾಮಿಕ್ಸ್‌’ ಸಂಶೋಧನೆಗೆ ಕಂಪ್ಯೂಟೇಷನ್‌ ಅಂಡ್‌ ಬಿಹೇವಿಯರಲ್‌ ಸೈನ್ಸ್‌ ಪ್ರಾಧ್ಯಾಪಕ ಸೆಂಥಿಲ್‌ ಮುಲ್ಲೈನಾಥನ್‌ ಅವರನ್ನು ‘ಸಾಮಾಜಿಕ ವಿಜ್ಞಾನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಯುವ ಪೀಳಿಗೆಯನ್ನು ವಿಜ್ಞಾನದ ಸಂಶೋಧನೆಗಾಗಿ ಈಗ ಉತ್ತೇಜಿಸದಿದ್ದರೆ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಉಜ್ವಲ ಭವಿಷ್ಯ ನಿರ್ಮಾಣ ಆಸಾಧ್ಯ.

- ಎನ್‌.ಆರ್‌.ನಾರಾಯಣಮೂರ್ತಿ, ಇಸ್ಫೋಸಿಸ್‌ ವಿಜ್ಞಾನ ಪ್ರತಿಷ್ಠಾನದ ಟ್ರಸ್ಟಿ

ನಾವು ಧೃತಿಗೆಡದೆ, ಶ್ರದ್ಧೆ ಮತ್ತು ಆಸಕ್ತಿಯಿಂದ ಮುಂದುವರೆದರೆ ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ಸು ಸಿಗಲು ಸಾಧ್ಯ.

- ನವಕಾಂತ್‌ ಭಟ್‌, ಪ್ರಶಸ್ತಿ ಪುರಸ್ಕೃತ

ಹವಾಮಾನ ವೈಪರೀತ್ಯದಿಂದ ಭಾರತದ ಮಳೆ ಮೇಲೆ ಭಾರೀ ಪರಿಣಾಮ ಉಂಟಾಗುತ್ತಿದೆ. ಈ ಬಗ್ಗೆ ಇನ್ನಷ್ಟುಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ.

- ಎಸ್‌.ಕೆ.ಸತೀಶ್‌, ಪ್ರಶಸ್ತಿ ಪುರಸ್ಕೃತ