ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗದ ಅರ್ಜಿದಾರರು ಹಾಗೂ ಭೂಮಿ ಕಳೆದುಕೊಂಡವರಿಗೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ವೆಂಕಟೇಶ್ ತಿಳಿಸಿದ್ದಾರೆ.

ಬೆಂಗಳೂರು (ಡಿ.16): ಅರ್ಕಾವತಿ ಬಡಾವಣೆಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ನಿವೇಶನ ಹಂಚಿಕೆಯಾಗದ ಅರ್ಜಿದಾರರಿಗೆ ಶೀಘ್ರ ಪರಿಹಾರ ದೊರೆಕಿಸುವ ಉದ್ದೇಶದಿಂದ ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಧಿಕಾರಿಗಳಿಗೆ ಚಾಟೀ ಬೀಸಿದ್ದಾರೆ.
ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ನಿವೇನಕ್ಕಾಗಿ ಪಾವತಿಸಿದ ಹಣಕ್ಕಾಗಿ ಮತ್ತು ಭೂಮಿ ಕಳೆದುಕೊಂಡವರು ಪರಿಹಾರಕ್ಕಾಗಿ ಬಿಡಿಎ ಸುತ್ತ ಅಲೆಯುತ್ತಿದ್ದರೂ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳು ಏಕೆ ಮುಂದಾಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಜತೆಗೆ ಬಿಡಿಎ ನಿರ್ಮಿಸಿರುವ ಬಡಾವಣೆಗಳಿಗೆ ಏಕೆ ಕುಡಿಯುವ ನೀರು ಹಾಗೂ ಒಳಚರಂಡಿ ಸೌಲಭ್ಯವನ್ನು ಒದಗಿಸಲು ಮುಂದಾಗುತ್ತಿಲ್ಲ ಎಂದು ಜಲಮಂಡಳಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡುವಂತೆ ಸಿಎಂ ಸೂಚಿಸಿದ್ದು, ಹಲವು ವರ್ಷಗಳ ಹಿಂದೆಯೇ ಪ್ರಾಧಿಕಾರಕ್ಕೆ ಅರ್ಜಿದಾರರು ಹಣ ಪಾವತಿಸಿರುವುದರಿಂದ ನಿವೇಶನ ನೀಡುವ ವೇಳೆ ರಿಯಾಯಿತಿ ನೀಡುವಂತೆ ಬಿಡಿಎ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜತೆಗೆ ಅರ್ಕಾವತಿ ಬಡಾವಣೆಗಾಗಿ ಭೂಮಿ ಬಿಟ್ಟುಕೊಟ್ಟು ರೈತರನ್ನು ಕಾಯಿಸದೆ ಆದಷ್ಟು ಬೇಗ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಿಡಿಎ ನಿರ್ಮಿಸಿರುವ ಬಡಾವಣೆಗಳಿಗೆ ಜಲಮಂಡಳಿಯಿಂದ ಕುಡಿಯುವ ನೀರು ಹಾಗೂ ಒಳಚರಂಡಿ ಸಮರ್ಪಕ ಸೌಲಭ್ಯಗಳನ್ನು ನೀಡುವ ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಆರೋಪಿಸಿದರು. ಇದರಿಂದ ಕೋಪಗೊಂಡ ಮುಖ್ಯಮಂತ್ರಿಗಳು ಬಿಡಿಎ ಬಡಾವಣೆಗಳಿಗೆ ಯಾಕೆ ಸೌಲಭ್ಯಗಳನ್ನು ಒದಗಿಸಲು ಮುಂದಾಗಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಜಲಮಂಡಳಿಯ ಹಿರಿಯ ಅಧಿಕಾರಿಗಳು ಜಲಮಂಡಳಿಗೆ ಬಿಡಿಎ ಸುಮಾರು ೩೦ ಕೋಟಿಯಷ್ಟು ಬಾಕಿ ಬಿಲ್ ಉಳಿಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಕೂಡಲೇ ಬಡಾವನೆಗಳಿಗೆ ಸೌಲಭ್ಯಗಳನ್ನು ಒದಗಿಸುವಂತೆಯೂ, ಹಂತ ಹಂತವಾಗಿ ಬಾಕಿ ಬಿಲ್ ಪಾವತಿಸುವಂತೆ ಬಿಡಿಎ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಿಕೆ!
ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗದ ಅರ್ಜಿದಾರರು ಹಾಗೂ ಭೂಮಿ ಕಳೆದುಕೊಂಡವರಿಗೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ವೆಂಕಟೇಶ್ ತಿಳಿಸಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಬಿಡಿಎ ಹಾಗೂ ಜಲಮಂಡಳಿ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಬಡಾವಣೆಗಳಲ್ಲಿ ನಿವೇಶನ ಮಂಜೂರಾದರೂ ಹಂಚಿಕೆಯಾಗದ ಅರ್ಜಿದಾರರ ಸಂಖ್ಯೆ ೧೮೦೦ಕ್ಕೂ ಹೆಚ್ಚು ಇದೆ. ಇದರೊಂದಿಗೆ ೩೫೦ಕ್ಕೂ ಹೆಚ್ಚು ಮಂದಿ ಭೂಮಿ ಕಳೆದುಕೊಂಡವರಿದ್ದು ಅವರಿಗೆ ಕೆಂಪೇಗೌಡ ಬಡಾವಣೆಯಲ್ಲಿಯೇ ನಿವೇಶನ ನೀಡಲು ತೀರ್ಮಾನಿಸಲಾಗಿದೆ ಎಂದರು.
ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ಬಡ್ಡಿ ಸಮೇತವಾಗಿ ಹಣ ವಾಪಸ್ ನೀಡುವಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ ಭೂಮಿ ಕಳೆದಕೊಂಡವರ ಪೈಕಿ ೩೦೦ಕ್ಕೂ ಹೆಚ್ಚು ಮಂದಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ಅರ್ಜಿದಾರರು ಹಾಗೂ ಭೂಮಿ ಕಳೆದುಕೊಂಡವರಿಗೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡುವ ಕುರಿತು ಸಂಬಂಧಿಸಿದ ಸಂಘಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಬಿಡಿಎ ಈಗಾಗಲೇ ನಿರ್ಮಾಣ ಮಾಡಲಾಗಿರುವ ವಿಶ್ವೇಶ್ವರಯ್ಯ ಬಡಾವಣೆ, ಕೆಂಪೇಗೌಡ ಬಡಾವಣೆ ಸೇರಿದಂತೆ ಕೆಲ ಬಡಾವಣೆಗೆ ಸಂಬಂಧಪಟ್ಟ ಬಾಕಿ ಬಿಲ್ ಪಾವತಿಸಿಲ್ಲ ಎಂಬ ಕಾರಣದಿಂದ ಜಲಮಂಡಳಿ ಕುಡಿಯುವ ನೀರು, ಒಳಚರಂಡಿ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಬಿಡಿಎಗೆ ಬರಬೇಕಿದೆ ಸಾವಿರ ಕೋಟಿ!
ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವವರು ನಿವೇಶನದ ಒಟ್ಟು ಮೊತ್ತದ ಶೇ. 12.5 ರಷ್ಟು ಹಣವನ್ನಷ್ಟೇ ಬಿಡಿಎಗೆ ಪಾವತಿಸಿದ್ದಾರೆ. ನಿವೇಶನ ಹಂಚಿಕೆಯಾಗಿರುವ ಅರ್ಜಿದಾರರಿಂದ ಬಿಡಿಎಗೆ ಸುಮಾರು ರೂ. 1000 ಕೋಟಿಯಷ್ಟು ಹಣ ಪಾವತಿಯಾಗಬೇಕಿದೆ. ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆಯಾಗಿರುವ ಅರ್ಜಿದಾರರು ಪ್ರಾಧಿಕಾರಕ್ಕೆ ಹಣ ಪಾವತಿಸಲಿದ್ದು, ಬಿಡಿಎಗೆ ಯಾವುದೇ ರೀತಿಯ ಆರ್ಥಿಕ ಸಂಕಷ್ಟವಿಲ್ಲ. ಹೀಗಾಗಿ ಪ್ರಾಧಿಕಾರಕ್ಕೆ ಹಣ ಬಂದಂತೆ ಬಾಕಿ ಮೊತ್ತ ಪಾವತಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.

ತಡವಾದರೆ ಗುತ್ತಿಗೆ ವಾಪಸ್!
ಕೆಂಪೇಗೌಡ ಬಡಾವಣೆ ಹಾಗೂ ಫ್ಲ್ಯಾಟ್ಸ್ ನಿರ್ಮಾಣ ಗುತ್ತಿಗೆಯನ್ನು ಪಡೆದಿರುವ ರಾಮಲಿಂಗಂ ಕನ್‌ಸ್ಟ್ರಕ್ಷನ್ ಸಂಸ್ಥೆಯ ಚಂದ್ರಕಾಂತ್ ರಾಮಲಿಂಗಂ ಬಂಧನಕ್ಕೆ ಒಳಗಾಗಿದ್ದು, ಇದರಿಂದ ಕೆಂಪೇಗೌಡ ಬಡಾವಣೆ ಹಾಗೂ ಬಿಡಿಎ ಫ್ಲ್ಯಾಟ್ಸ್ ನಿರ್ಮಾಣದಲ್ಲಿ ವಿಳಂಬ ಉಂಟಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಂದ್ರಕಾಂತ್ ರಾಮಲಿಂಗಂ ಬಂಧನಕ್ಕೂ, ಬಿಡಿಎಯಲ್ಲಿ ಗುತ್ತಿಗೆ ಪಡೆದಿರುವುದಕ್ಕೆ ಯಾವುದೇ ಸಂಬಂಧವಿಲ್ಲ. ಒಂದೊಮ್ಮೆ ನಿರ್ಮಾಣ ಕಾಮಗಾರಿಯಲ್ಲಿ ವಿಳಂಬವಾದರೆ ನೋಟಿಸ್ ನೀಡಿ ಗುತ್ತಿಗೆ ವಾಪಸ್ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ವೆಂಕಟೇಶ್ ತಿಳಿಸಿದರು.