ದೇಶದ 4 ಪ್ರಮುಖ ಸಚಿವರಲ್ಲಿ ಒಬ್ಬರಾಗಿರುವ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಯಾವುದೇ ಭದ್ರತೆ ಇಲ್ಲದೆ ಸಾಮಾನ್ಯ ಪ್ರಜೆಯಂತೆ ರಾಜಧಾನಿಯ ರಸ್ತೆಯಲ್ಲಿ ನಡೆದುಕೊಂಡು ಊಟಕ್ಕೆ ಹೋಗುವ ಮೂಲಕ ಶನಿವಾರ ಗಮನ ಸೆಳೆದರು.

ಬೆಂಗಳೂರು (ಡಿ.31): ದೇಶದ 4 ಪ್ರಮುಖ ಸಚಿವರಲ್ಲಿ ಒಬ್ಬರಾಗಿರುವ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಯಾವುದೇ ಭದ್ರತೆ ಇಲ್ಲದೆ ಸಾಮಾನ್ಯ ಪ್ರಜೆಯಂತೆ ರಾಜಧಾನಿಯ ರಸ್ತೆಯಲ್ಲಿ ನಡೆದುಕೊಂಡು ಊಟಕ್ಕೆ ಹೋಗುವ ಮೂಲಕ ಶನಿವಾರ ಗಮನ ಸೆಳೆದರು. ನಗರದ ಅಲಿ ಅಸ್ಗರ್ ರಸ್ತೆಯಲ್ಲಿರುವ ತಮ್ಮ ಸಂಸದರ ಕಚೇರಿಯಿಂದ ಶನಿವಾರ ಮಧ್ಯಾಹ್ನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿನ ಚಂದ್ರಿಕಾ ಹೋಟೆಲ್‌ಗೆ ಅವರು ಯಾವುದೇ ಭದ್ರತೆ ಇಲ್ಲದೆ ತೆರಳಿದರು.

ದಾರಿಹೋಕರೆಲ್ಲ ಅಚ್ಚರಿಯಿಂದಲೇ ನೋಡುತ್ತಿದ್ದರು. ಕೆಲವರಿಗೆ ಯಾರಿವರು ಎಂಬುದೇ ಗೊತ್ತಾಗಲಿಲ್ಲ. ರಕ್ಷಣಾ ಇಲಾಖೆಯ ಸಚಿವರಾದರೂ ಸಹ ಯಾವುದೇ ಭದ್ರತೆ ಇಲ್ಲದೆ ಜನಸಾಮಾನ್ಯರಂತೆ ಕೆಲವೇ ಕೆಲವು ಮಂದಿಯೊಂದಿಗೆ ಹೆಜ್ಜೆ ಹಾಕಿದರು.

ಕೇಂದ್ರ ಸಚಿವರು ನಡೆದು ಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಂಚಾರ ಪೊಲೀಸರು ಯಾವುದೇ ವಾಹನಗಳು ತೆರಳದಂತೆ ನೋಡಿಕೊಂಡು ಸಚಿವರಿಗೆ ನಡೆದುಕೊಂಡು ಹೋಗಲು ಅನುವು ಮಾಡಿಕೊಟ್ಟರು. ನಂತರ ಚಂದ್ರಿಕಾ ಹೋಟೆಲ್‌ಗೆ ತೆರಳಿದ ಅವರು ಸಾವಯವ ಭೋಜನ ಸವಿದರು. ಜನಪ್ರತಿನಿಧಿಗಳು ಪ್ರಭಾವಿ ಹುದ್ದೆ ಅಲಂಕರಿಸಿದರೆ ಭಾರೀ ಭದ್ರತಾ ಹೊಂದಿರುವುದು ಸಾಮಾನ್ಯ.

ಕೆಲವರು ಖಾಸಗಿ ಭದ್ರತೆಯನ್ನೂ ನಿಯೋಜಿಸಿಕೊಳ್ಳುತ್ತಾರೆ. ಆದರೆ, ಸಾಮಾನ್ಯರಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತರರಿಗಿಂತ ಭಿನ್ನ ಎಂಬುದನ್ನು ತೋರಿಸಿಕೊಟ್ಟರು.