ಮೈಸೂರು[ಮೇ.20]: ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸರ್ಕಾರ ಬೀಳಿಸಲಿದ್ದಾರೆ ಎಂದು ಭವಿಷ್ಯ ನೀಡುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆಂದು ಬಿಜೆಪಿಯವರು ಸೂಟುಬೂಟು ಹೊಲಿಸಿಕೊಂಡು ಕಾಯುತ್ತಿದ್ದಾರೆ. ಆದರೆ ಅವರ ಆಸೆ ಈಡೇರಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಸಿದ್ದರಾಮಯ್ಯರಿಂದಲೇ ಸರ್ಕಾರ ಉಳಿಯಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಕಲಾಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೂಪ ಪ್ರಕಾಶನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನಕುಮಾರ್‌ ಅವರ ‘ಸಮುದಾಯ ನಾಯಕರು’, ‘ಸಮಾಜಮುಖಿ ಶ್ರೀಸಾಮಾನ್ಯರು’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಮೈಸೂರು ಭಾಗದ ನಾಯಕರಾದ ಸಿದ್ದರಾಮಯ್ಯ ಅವರಿಂದಲೇ ಈಗಿನ ಸರ್ಕಾರ ನಡೆಯುತ್ತಿದೆ. ಅವರಿಂದಲೇ ಮುಂದಿನ ದಿನಗಳಲ್ಲೂ ಸರ್ಕಾರ ಉಳಿಯಲಿದೆ. ಲೋಕಸಭಾ ಚುನಾವಣೆ ನಂತರವೂ ಯಾವುದೇ ಕಾರಣಕ್ಕೂ ಸರ್ಕಾರ ಬಿದ್ದು ಹೋಗಲ್ಲ. ಕೇಂದ್ರದಲ್ಲಿ ಪ್ರಧಾನಿ ಮೋದಿ ಸೀಟು ಅಲ್ಲಾಡುತ್ತಿರುವುದಕ್ಕೆ ಅವರು ಕೇದಾರನಾಥದಲ್ಲಿ ಧ್ಯಾನಕ್ಕೆ ಕುಳಿತಿದ್ದಾರೆ. ಅವರು ಧ್ಯಾನ ಮಾಡಿದರೆ ಸೀಟು ಬರಲು, ನಾವು ದೇವಸ್ಥಾನಕ್ಕೆ ಹೋದರೆ ಅದು ಟೆಂಪಲ್‌ ರನ್‌ ಆಗುತ್ತಾ ಎಂದು ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದು ಹೊಗಳಿದರೆ ತಪ್ಪೇನು?:

ಸಚಿವ ಸಿ.ಪುಟ್ಟರಂಗಶೆಟ್ಟಿಅವರು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದಿರುವುದರ ಹಿಂದೆ ವಿಧೇಯತೆ ಇದೆ ಅಷ್ಟೆ. ಪುಟ್ಟರಂಗಶೆಟ್ಟಿಬೆಳೆಯಲು ಸಿದ್ದರಾಮಯ್ಯ ಅವರೇ ಕಾರಣರಾದ್ದರಿಂದ ಅಭಿಮಾನಕ್ಕೆ ಆ ಮಾತು ಹೇಳಿದ್ದಾರೆ ಅಷ್ಟೆ. ಅದು ದೊಡ್ಡ ತಪ್ಪು ಹೇಗಾಗುತ್ತದೆ? ಬಿಜೆಪಿಯವರು 10 ತಿಂಗಳಿಂದಲೂ ಸೂಟುಬೂಟು ಹೊಲಿಸಿಕೊಂಡು ಕಾಯುತ್ತಿದ್ದಾರೆ. ಹಾಗೊಂದು ವೇಳೆ ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆ, ಅಧಿಕಾರಕ್ಕೆ ಬರಬಹುದು ಎಂದು ಸೂಟುಬೂಟು ಹೊಲಿಸಿಕೊಂಡು ಕಾಯುತ್ತಿದ್ದರೆ, ಆ ಆಸೆ ಈಡೇರುವುದಿಲ್ಲ ಎಂದು ವ್ಯಂಗ್ಯವಾಡಿದರು.

ನಮಗೆ ಸೋಲು ಹೊಸದಲ್ಲ:

ಎಚ್‌.ಡಿ.ದೇವೇಗೌಡರು ಕನಕಪುರ, ಹೊಳೆನರಸೀಪುರದಲ್ಲಿ ಸೋತರು. ನಂತರ ಗೆದ್ದು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದರು. ಒಬ್ಬ ಕನ್ನಡಿಗ ಪ್ರಧಾನಿಯಾದನಲ್ಲ ಎಂದು ನಮ್ಮ ನಾಡಿನವರೇ ಅಸೂಯೆಪಟ್ಟುಕೊಂಡರು ಎಂದ ಕುಮಾರಸ್ವಾಮಿ, ನಮ್ಮ ಕುಟುಂಬಕ್ಕೆ ಸೋಲು ಹೊಸದಲ್ಲ. ದೇವೇಗೌಡರು, ರೇವಣ್ಣ, ನಾನು ಮೂವರೂ ಸೋತಿದ್ದೇವೆ. ಅಲ್ಲಿಗೆ ನಮ್ಮ ರಾಜಕೀಯ ಮುಗಿದು ಹೋಯಿತಾ? ದಕ್ಷಿಣ ಕರ್ನಾಟಕದಲ್ಲಿ ದೇವೇಗೌಡ ಕುಟುಂಬ ತುಳಿಯುತ್ತಿರುವಂತೆ ಉತ್ತರ ಕರ್ನಾಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬ ತುಳಿಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖರ್ಗೆ ಬಗ್ಗೆ ನಾನು ಒಳ್ಳೆಯ ಮಾತುಗಳನ್ನಾಡಿದೆ ಅಷ್ಟೆಎಂದರು.

ಮೈಸೂರು ರಾಜಕೀಯದಲ್ಲಿ ಜಾತಿ:

ಮೈಸೂರಿನ ಜನತೆ ಹಿಂದೆ ಜಾತಿ ನೋಡಿ ಮತ ಹಾಕುತ್ತಿರಲಿಲ್ಲ. ಇಲ್ಲಿನ ರಾಜಕೀಯ ಕೂಡ ಜಾತಿ ಮೇಲೆ ನಡೆದಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಜಾತಿ ರಾಜಕೀಯ ಪಸರಿಸಿದೆ. ಆದರೆ, ಜನ ಜಾತಿ ಮೀರಿ ನಾಯಕರನ್ನು ಬೆಳೆಸಿದ್ದಾರೆ. ನಾನು ರಾಜಕೀಯಕ್ಕೆ ಬರಬೇಕೆಂದು ಬಂದವನಲ್ಲ. ನಜರ್‌ಬಾದ್‌ನಲ್ಲಿ ಚೆನ್ನಾಂಬಿಕ ಫಿಲಂ ಸಂಸ್ಥೆ ಮಾಡಿಕೊಂಡಿದ್ದೆ. ಅನಿವಾರ್ಯವಾಗಿ ರಾಜಕೀಯಕ್ಕೆ ಬರಬೇಕಾಯಿತು. ಆದರೆ, ಕೆಲಸ ಮಾಡಲು ಮಾಧ್ಯಮದವರು ಬಿಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.