ಬೆಂಗಳೂರು(ಸೆ.17) ಧರ್ಮಸ್ಥಳದ ಶಾಂತಿವನದಲ್ಲಿ ಕುಳಿತು ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರಕಾರದ ವಿರುದ್ಧ ಮಾತನಾಡಿದ್ದಾಗ ಇವರೇ ಮೈತ್ರಿ ಸರಕಾರಕ್ಕೆ ಅಡ್ಡಿಯಾಗಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರೆ ಮೈತ್ರಿ ಸರಕಾರಕ್ಕೆ ಕಾವಲಾಗುವ ಲಕ್ಷಣ ಕಂಡುಬರುತ್ತಿದೆ.

ಬಿಜೆಪಿಯ ಆಪರೇಷನ್ ಕಮಲಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರೆ ಅಡ್ಡವಾಗಿ ನಿಂತಿದ್ದಾರಾ? ವಿದೇಶದಿಂದ ಸಿದ್ದು ವಾಪಸಾದ ಮೇಲೆ ಇಂಥದ್ದೊಂದು ಬೆಳವಣಿಗೆ ಕಂಡುಬಂದಿದೆ.

ಕಾಂಗ್ರೆಸ್ ಅತೃಪ್ತರನ್ನು ಸಮಾಧಾನ ಮಾಡುವ ಜವಾಬ್ದಾರಿ ಪಡೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ನಿನ್ನೆಯ ಹಿರಿಯ ನಾಯಕರ ಸಭೆಯ ಬಳಿಕ ಅತೃಪ್ತರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಸಿದ್ಧರಾಮಯ್ಯರ ಸಂಧಾನ ಮಾತುಕತೆಗಳು ಸಫಲವಾದ್ರೆ ಆಪರೇಷನ್ ಕಮಲಕ್ಕೆ ತೊಂದರೆಯಾಗುವುದು ನಿಶ್ಚಿತ. ಇನ್ನೊಂದು ಕಡೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ರಾಜಕೀಯ ನಡೆಯನ್ನು ಗಮನಿಸಿರುವ ಬಿಜೆಪಿ ಸಿದ್ಧರಾಮಯ್ಯರ ಮನವೊಲಿಕೆಗೆ ಅತೃಪ್ತ ಶಾಸಕರು ಸಮಾಧಾನಗೊಂಡರೆ ತಮ್ಮ ಕಾರ್ಯತಂತ್ರಕ್ಕೆ ಅಡ್ಡಿಯಾಗುವುದು ಎಂಬುದನ್ನು ಲೆಕ್ಕ ಹಾಕಿದ್ದಾರೆ.

ವಿದೇಶದಿಂದ ವಾಪಸ್ಸಾಗಿರುವ ಸಿದ್ಧರಾಮಯ್ಯರನ್ನುಅತೃಪ್ತ ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಬಿಜೆಪಿಯ ಸಂಪರ್ಕಕ್ಕೆ ಸಿಕ್ಕಿದ್ದ ಶಾಸಕರು ಸಹ ಸಿದ್ಧರಾಮಯ್ಯರನ್ನು ಭೇಟಿಯಾಗುತ್ತಿರುವ ಆತಂಕ ಬಿಜೆಪಿಗೆ ಕಾಡುತ್ತಿದೆ. ಕಾದು ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ಬಿಜೆಪಿ ಮುಂದಾಗಿದೆ.