ನವದೆಹಲಿ [ಆ.11]:  ರಾಜ್ಯದ 16 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಮಂತ್ರಿಮಂಡಲವಿಲ್ಲ. ಮುಖ್ಯಮಂತ್ರಿಗಳು ಏಕಪಾತ್ರಾಭಿನಯ ಮಾಡುತ್ತಿದ್ದಾರೆ. ಅಧಿಕಾರಿಗಳ ಮೇಲ್ವಿಚಾರಣೆ ಇಲ್ಲದಂತಾಗಿದೆ. ಆಡಳಿತಯಂತ್ರ ಕುಸಿದಿದೆ ಎಂದು ರಾಜ್ಯ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇಲ್ಲಿನ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರವಾಹ ಪರಿಸ್ಥಿತಿಯಲ್ಲಿ ನಾನು ಜನರೊಂದಿಗೆ ಇರಬೇಕಿತ್ತು. ಈ ಬಗ್ಗೆ ಟೀಕೆ ಏನೇ ಬರಲಿ. ನನ್ನ ಕಣ್ಣಿಗೆ ಶಸ್ತ್ರಚಿಕಿತ್ಸೆ ಆಗಿರುವ ಕಾರಣ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ವೈದ್ಯರು 15 ದಿನದ ವಿಶ್ರಾಂತಿ ಸೂಚಿಸಿದ್ದಾರೆ. ತಲೆಗೆ ಸ್ನಾನ ಮಾಡುವಂತೆಯೂ ಇಲ್ಲ ಎಂದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿಮ್ಮ ಕ್ಷೇತ್ರ ಬಾದಾಮಿಗೆ ಹೋಗಲು ಕಣ್ಣಿನ ಆಪರೇಷನ್‌ ಅಡ್ಡಿಯಾಗುತ್ತದೆ ಎಂದು ಹೇಳಿ ದೆಹಲಿಗೆ ಆಗಮಿಸಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಾದಾಮಿಗೆ ಹೋದರೆ ಧೂಳು ಇರುತ್ತದೆ. ವೈದ್ಯರು ಧೂಳಿನಿಂದ ದೂರ ಇರುವಂತೆ ಹೇಳಿದ್ದಾರೆ. ಈಗ ನಾನು ಏಸಿಯಲ್ಲಿ ಓಡಾಡುತ್ತಿದ್ದೇನೆ. ವಿಮಾನ ನಿಲ್ದಾಣಕ್ಕೆ ಬರುವಾಗ ಏಸಿ ಗಾಡಿಯಲ್ಲಿ ಬಂದೆ. ವಿಮಾನ ನಿಲ್ದಾಣ, ವಿಮಾನ ಎಲ್ಲವೂ ಹವಾನಿಯಂತ್ರಿತವೇ. ಇಲ್ಲೂ ಏಸಿಯಿದೆ. ಮುಂಜಾಗ್ರತೆ ವಹಿಸದಿದ್ದರೆ ಇನ್‌ಫೆಕ್ಷನ್‌ ಆಗಬಹುದು. ನನಗೆ ಶುಗರ್‌ ಬೇರೆಯಿದೆ ಎಂದರು.

ನಾನು ಈಗ ಬಾದಾಮಿಯಲ್ಲಿ ಇರಬೇಕಿತ್ತು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು ಆದರೆ ಸಾಧ್ಯವಾಗುತ್ತಿಲ್ಲ ಎಂಬ ನೋವಿದೆ. ನನ್ನ ಕಣ್ಣಿನ ಆಪರೇಷನ್‌ ಆದ ಮೇಲೆ ಪ್ರವಾಹ ಬಂತು. ಇಲ್ಲದಿದ್ದರೆ ಆಪರೇಷನ್‌ ಅನ್ನು ಮುಂದೂಡುತ್ತಿದ್ದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ನನ್ನ ಮಗನಿಗೆ ಸೂಚಿಸಿದ್ದೇನೆ ಎಂದರು.