ಬೆಂಗಳೂರು[ಸೆ.16]: ‘ರಾಜ್ಯದ ಅತಿವೃಷ್ಟಿಪೀಡಿತ ಪ್ರದೇಶಗಳ ಪರಿಹಾರಕ್ಕಾಗಿ ಒತ್ತಾಯಿಸದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿರುವುದಾಗಿ ತಿಳಿದುಬಂದಿದೆ. ಇದು ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿ ಹೋಗಿರುವ ಸೂಚನೆ. ಇದು ಸತ್ಯವಲ್ಲದಿದ್ದರೆ ಕೇಂದ್ರ ಸರ್ಕಾರವು ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

ರಾಜ್ಯದಲ್ಲಿ ಪ್ರವಾಹ ಉಂಟಾಗಿ 45 ದಿನ ಆಗಿದೆ. ಆದರೆ ಇದುವರೆಗೂ ನಯಾಪೈಸೆ ನೆರವನ್ನು ಕೇಂದ್ರ ನೀಡಿಲ್ಲ. ರಾಜ್ಯ ಸರ್ಕಾರ 38 ಸಾವಿರ ಕೋಟಿ ರು. ನೆರವು ಬೇಕೆಂದು ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರವು ನೆರವು ನೀಡದೆ ಸ್ಪಷ್ಟನೆ ಬಯಸಿ ಮನವಿಯನ್ನು ವಾಪಸು ಕಳುಹಿಸಿದೆ. ಈ ರೀತಿ ರಾಜ್ಯದ ಜನತೆಯ ಜೀವನದ ಜತೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ನೆರೆ ಪರಿಹಾರ ನೀಡದ ಕೇಂದ್ರ ಹಾಗೂ ಪರಿಹಾರ ತರುವಲ್ಲಿ ವಿಫಲವಾದ ರಾಜ್ಯ ಸರ್ಕಾರಗಳ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ರಾಜ್ಯಕ್ಕೆ ಬಂದೆರಗಿದ ಅತಿವೃಷ್ಟಿಯಿಂದ 36 ಸಾವಿರ ಕೋಟಿ ರು. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಇಷ್ಟಾದರೂ ಕೇಂದ್ರ ಸರ್ಕಾರದಿಂದ ನಯಾಪೈಸೆ ನೆರವು ಬಂದಿಲ್ಲ. ರಾಜ್ಯದ ಹೇಡಿ ಸರ್ಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಇಲ್ಲದಂತಾಗಿದೆ. ದಿನಕ್ಕೊಂದು ದೇಶ ಸುತ್ತುವ, ಗಳಿಗೆಗೊಂದು ವೇಷ ಬದಲಿಸುವ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಒಂದು ಗಳಿಗೆ ಬಂದು ಸಂತ್ರಸ್ತರ ಗೋಳು ಕೇಳುವ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ಗಳ ಕಿರುಕುಳ ನಿಲ್ಲಿಸಲಿ:

ಅತಿವೃಷ್ಟಿಪೀಡಿತ ರೈತರ ಬ್ಯಾಂಕುಗಳಲ್ಲಿನ ಸಾಲ ಬಾಕಿಗಾಗಿ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ಈಗಾಗಲೇ ನೆರೆಯಿಂದ ಸಂತ್ರಸ್ತರಾಗಿ ಬದುಕು ಕಳೆದುಕೊಂಡಿರುವವರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯ ಸರ್ಕಾರಕ್ಕೇನಾದರೂ ಒಂದಿಷ್ಟುಮಾನವೀಯತೆ ಎನ್ನುವುದಾದರೂ ಇದ್ದರೆ ಇಂತಹ ಕ್ರೌರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅತಿವೃಷ್ಟಿಯಿಂದ ಮನೆ-ತೋಟ-ಗದ್ದೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹಾವೇರಿ, ಗದಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಐದು ಮಂದಿ ರೈತರ ಕುಟುಂಬಕ್ಕೆ ನನ್ನ ಸಂತಾಪಗಳು. ಇದೇ ರೀತಿ ನೂರಾರು ರೈತರು ಅಸಹಾಯಕರಾಗಿ ಆತ್ಮಹತ್ಯೆಯ ದಾರಿಯಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದ್ದೂ ಸತ್ತಂತಿವೆ. ನಮ್ಮ ಕಾಲದಲ್ಲಿ ರೈತರು ಆತ್ಮಹತ್ಯೆಯ ದಾರಿ ಹಿಡಿದಾಗ ನಮ್ಮ ಸರ್ಕಾರ ಕೃಷಿ ಭಾಗ್ಯ, ಅನ್ನಭಾಗ್ಯ, ಕ್ಷೀರಧಾರೆಯಂತಹ ಯೋಜನೆಗಳ ಮೂಲಕ ನೆರವಾಗಿ ಆತ್ಮಹತ್ಯೆಯ ಸರಣಿಯನ್ನು ತಡೆದಿದ್ದೆವು. ಆದರೆ, ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳಿಗೂ ಬದ್ಧತೆ ಇಲ್ಲ ಎಂದು ದೂರಿದರು.

ಕಾಲ್ಗುಣದಂತಹ ಮೌಢ್ಯದಲ್ಲಿ ನನಗೆ ನಂಬಿಕೆ ಇಲ್ಲ. ಆದರೆ 2009ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಅತಿವೃಷ್ಟಿಬಂದೆರಗಿತು. ಅತಿವೃಷ್ಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಮನಮೋಹನ ಸಿಂಗ್‌ ಧಾವಿಸಿ ಬಂದು ಸಮೀಕ್ಷೆ ನಡೆಸಿ ತಕ್ಷಣ 1500 ಕೋಟಿ ರು. ಪರಿಹಾರ ಘೋಷಿಸಿದ್ದರು.

ನಮ್ಮ ಪ್ರತಿಭಾವಂತ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ನಡೆಸಿದ ಚಂದ್ರಯಾನ-2 ಪ್ರಯೋಗ ನರೇಂದ್ರ ಮೋದಿ ಹಾಜರಿ ಹಾಕಿದರೂ ವಿಫಲವಾಯಿತು. ಪ್ರಧಾನಿಗಳು ಅಷ್ಟೇ ಸಮಯವನ್ನು ಅತಿವೃಷ್ಟಿಪೀಡಿತ ಪ್ರದೇಶದ ಭೇಟಿಗೂ ನೀಡಿದ್ದರೆ ಪ್ರಾಯಶ್ಚಿತ್ತ ಮಾಡಿಕೊಂಡಂತಾಗುತ್ತಿತ್ತು. ಆದರೆ, ನೆರೆಯಿಂದ ಕಣ್ಣೀರು ಹಾಕುತ್ತಿರುವ ಜನರ ಗೋಳು ಕೇಳಲು ಪ್ರಧಾನಮಂತ್ರಿಗಳು ಮನಸ್ಸು ಮಾಡಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರು ಪುಕ್ಕಲರು: ಸಿದ್ದು

ಬಿಜೆಪಿ ನಾಯಕರು ಪುಕ್ಕಲರು. ಒಬ್ಬರಿಗೂ ಧೈರ್ಯವಿಲ್ಲ. ಹೀಗಾಗಿ ಅವರಾರ‍ಯರೂ ಹೈಕಮಾಂಡನ್ನು ಪ್ರಶ್ನಿಸುವುದೇ ಇಲ್ಲ ಎಂದು ಸಿದ್ದರಾಮಯ್ಯಹೇಳಿದ್ದಾರೆ.

ನಾನು ಕಂಡಂತೆ ರಾಜ್ಯದ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದರೆ ಅದು ಯಡಿಯೂರಪ್ಪ. ಮಂಡ್ಯ ಜಿಲ್ಲೆಯವರಾದರೂ ಈ ಮಣ್ಣಿನ ಸ್ವಾಭಿಮಾನ, ಗಡಸುತನ ಅವರಲ್ಲಿ ಇಲ್ಲ. ಅವರೊಬ್ಬ ದುರ್ಬಲ ಮುಖ್ಯಮಂತ್ರಿ ಎಂದು ಟೀಕಿಸಿದ್ದಾರೆ.