ಉತ್ತರಪ್ರದೇಶ ದೊಡ್ಡ ರಾಜ್ಯವೆಂದ ಮಾತ್ರಕ್ಕೆ ಅದರ ಫಲಿತಾಂಶಕ್ಕೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಪಂಜಾಬ್, ಗೋವಾ, ಮಣಿಪುರದಂತಹ ಪುಟ್ಟ ರಾಜ್ಯಗಳ ಫಲಿತಾಂಶವನ್ನೂ ಪರಿಗಣಿಸಬೇಕು ಎಂದು ಮಾಧ್ಯಮಗಳಿಗೆ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದ್ದಾರೆ.

ಬೆಂಗಳೂರು(ಮಾ. 11): ಉತ್ತರಪ್ರದೇಶ ಹಾಗೂ ಉತ್ತರಾಖಂಡ್'ನಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಐದು ರಾಜ್ಯಗಳಲ್ಲಿ ಬರುತ್ತಿರುವ ಫಲಿತಾಂಶ ನಿರೀಕ್ಷಿತವೇ ಆಗಿದೆ ಎಂದು ಹೇಳಿದ್ದಾರೆ. ಉತ್ತರಾಖಂಡ್'ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡುದರಲ್ಲಿಯೂ ಯಾವುದೇ ಅಚ್ಚರಿ ಇಲ್ಲ ಎಂದವರು ಹೇಳಿದ್ದಾರೆ.

ಐದೂ ರಾಜ್ಯಗಳಲ್ಲಿ ಆಡಳಿತವಿರೋಧದ ಸಹಜ ಅಲೆ ಕೆಲಸ ಮಾಡುತ್ತಿದೆ. ಉತ್ತರಾಖಂಡ್'ನಲ್ಲಿ ಕಾಂಗ್ರೆಸ್ ಸರಕಾರ ಇದೇ ಅಲೆಯಲ್ಲಿ ಸೋಲಪ್ಪಿದೆ. ಗೋವಾದಲ್ಲಿ ಬಿಜೆಪಿಯೂ ಅಧಿಕಾರ ಕಳೆದುಕೊಂಡಿದೆ. ಪಂಜಾಬ್'ನಲ್ಲಿಯೂ ಆಡಳಿತಾರೂಢ ಸರಕಾರ ಸೋಲಪ್ಪಿ, ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿದೆ. ಚುನಾವಣೆಯಲ್ಲಿ ಇಂತಹ ಆಡಳಿತವಿರೋಧಿ ಅಲೆ ಸಹಜ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.

ಉತ್ತರಪ್ರದೇಶ ದೊಡ್ಡ ರಾಜ್ಯವೆಂದ ಮಾತ್ರಕ್ಕೆ ಅದರ ಫಲಿತಾಂಶಕ್ಕೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಪಂಜಾಬ್, ಗೋವಾ, ಮಣಿಪುರದಂತಹ ಪುಟ್ಟ ರಾಜ್ಯಗಳ ಫಲಿತಾಂಶವನ್ನೂ ಪರಿಗಣಿಸಬೇಕು ಎಂದು ಮಾಧ್ಯಮಗಳಿಗೆ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದ್ದಾರೆ.

ಉತ್ತರಪ್ರದೇಶ ಚುನಾವಣೆಗೂ ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಗೂ ಯಾವುದೇ ಸಂಬಂಧವಿರುವುದಿಲ್ಲ. ಅದರ ಯಾವುದೇ ಪರಿಣಾಮ ಇಲ್ಲಾಗುವುದಿಲ್ಲ. ಇಲ್ಲಿಯ ರಾಜಕೀಯ ಸ್ಥಿತಿ, ಸರಕಾರದ ನೀತಿಗಳು ಉಪಚುನಾವಣೆಯಲ್ಲಿ ಕೆಲಸ ಮಾಡುತ್ತವೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀನಿವಾಸ ಪ್ರಸಾದ್ ಅವರು ಗೆಲುವಿನ ಭ್ರಮೆಯಲ್ಲಿದ್ದಾರೆ ಎಂದೂ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಟೀಕೆ ಮಾಡಿದ್ದಾರೆ.