ಲೋಕಸಭಾ ಚುನಾವಣೆಗೆ ಒಂದೆಡೆ ಸಿದ್ಧತೆ ನಡೆಯುತ್ತಿದೆ. ಇನ್ನೊಂದೆ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೂ ಕೂಡ ಸಂಭವನೀಯರ ಪಟ್ಟಿಯಲ್ಲಿ ಸಿದ್ಧರಾಮಯ್ಯ ಹೆಸರು ಸೇರ್ಪಡೆಯಾಗಿದೆ. 

ಬೆಂಗಳೂರು :  ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಈ ಆಗ್ರಹ ಕೇಳಿ ಬಂದಿದ್ದು, ಸಿದ್ದರಾಮಯ್ಯ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದರೆ, ಹಾಲಿ ಬಿಜೆಪಿಯ ಕೈಯಲ್ಲಿ ಇರುವ ಈ ಕ್ಷೇತ್ರ ಖಚಿತವಾಗಿ ಕಾಂಗ್ರೆಸ್‌ಗೆ ದೊರೆಯಲಿದೆ ಎಂದು ಈ ನಾಯಕರು ವಾದಿಸಿದರು ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಶನಿವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಜಿಲ್ಲಾ ನಾಯಕರು ಈ ಆಗ್ರಹ ಮಾಡಿದರು. ಆದರೆ, ಈ ವೇಳೆ ಸಭೆಯಲ್ಲಿ ಹಾಜರಿದ್ದ ಸಿದ್ದರಾಮಯ್ಯ ಅವರು ತಮ್ಮದೇ ಧಾಟಿಯಲ್ಲಿ ಚುನಾವಣೆ ನಿಲ್ಲುವುದಿಲ್ಲ ಎಂದು ಸ್ಪಷ್ಟವಾಗಿ ತಳ್ಳಿಹಾಕಿದರು. ನಾನು ಈಗಾಗಲೇ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದೇನೆ. ನೀವೇ ಒಬ್ಬರು ಗೆಲ್ಲುವ ಅಭ್ಯರ್ಥಿಯನ್ನು ಸೂಚಿಸಿ ಗೆಲ್ಲಿಸಿಕೊಂಡು ಬನ್ನಿ ಎಂದು ಸಲಹೆ ನೀಡಿದರು ಎಂದು ತಿಳಿದುಬಂದಿದೆ.

ಆದಾಗ್ಯೂ ಸಂಭವನೀಯರ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ಉಳಿಸಿಕೊಳ್ಳಲು ಸಭೆ ತೀರ್ಮಾನಿಸಿತು. ಜತೆಗೆ, ಬಸನಗೌಡ ಬಾದರ್ಲಿ, ಬಸವರಾಜ ರಾಯರೆಡ್ಡಿ, ಶಿವರಾಮೇಗೌಡ, ವಿರೂಪಾಕ್ಷಪ್ಪ, ಕರಿಯಪ್ಪ ಸೇರಿ 5-6 ಮಂದಿ ಸಂಭಾವ್ಯರ ಹೆಸರು ಸಿದ್ಧಪಡಿಸಲಾಯಿತು ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಸಭೆ ಬಳಿಕ ಮಾಹಿತಿ ನೀಡಿದ ಮಾಜಿ ಸಚಿವ ಶಿವರಾಜ್‌ ತಂಗಡಗಿ, ನಮ್ಮ ಕೊಪ್ಪಳ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಸ್ಪರ್ಧಿಸಬೇಕು ಎಂಬ ಬಯಕೆ ಇದೆ. ಪ್ರಸ್ತುತ ಬಸನಗೌಡ ಬಾದರ್ಲಿ, ಬಸವರಾಜರಾಯರೆಡ್ಡಿ, ಶಿವರಾಮೇಗೌಡ, ವಿರೂಪಾಕ್ಷಪ್ಪ, ಕರಿಯಪ್ಪ ಸೇರಿದಂತೆ 5-6 ಮಂದಿ ಆಕಾಂಕ್ಷಿಗಳಿದ್ದಾರೆ. ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ಎಲ್ಲರೂ ಸೇರಿ ಅವರ ಗೆಲುವಿಗೆ ಶ್ರಮಿಸಲಿದ್ದೇವೆ. ಹೀಗಾಗಿ ಸ್ಪರ್ಧಿಸುವಂತೆ ಮನವಿ ಮಾಡಿದ್ದು, ಅಂತಿಮವಾಗಿ ಯಾರು ಅಭ್ಯರ್ಥಿ ಯಾರು ಆಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸಿದೆ ಎಂದು ತಿಳಿಸಿದರು.