ಬೆಂಗಳೂರು[ಜೂ.07]: ‘ಆನೆ ನಡೆದದ್ದೇ ದಾರಿ ಅಂತಾರೆ. ಅದೇನೋ ನಿಜ. ಆದರೆ ಒಂಟಿ ಸಲಗ ಯಾವತ್ತಿದ್ರೂ ಅಪಾಯನೇ. ಅದು ಒಂಟಿಯಾಗಿದ್ದಾಗ ಭಯಗೊಂಡು ಏನು ಮಾಡುವುದು ಎಂದು ತಿಳಿಯದೇ ಸಿಕ್ಕವರ ಮೇಲೆ ದಾಳಿ ಮಾಡುತ್ತದೆ.’

ಹೀಗೆಂದು ಹೇಳಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

‘ದುನಿಯಾ’ ವಿಜಯ್‌ ನಟನೆ ಮತ್ತು ನಿರ್ದೇಶನದ ಹೊಸ ಚಲನಚಿತ್ರ ‘ಸಲಗ’ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ನಿಮ್ಮ ಚಿತ್ರಕ್ಕೆ ಸಲಗ ಎಂದು ಹೆಸರಿಟ್ಟುಕೊಂಡಿದ್ದೀರಿ. ಇಲ್ಲಿ ಸಲಗಗಳ ಗುಂಪೇ ಇದೆ. ಒಂಟಿ ಸಲಗಗಳಿಗೆ ಯಾವಾಗಲೂ ಭಯ ಮತ್ತು ಆತಂಕ ಒಟ್ಟೊಟ್ಟಿಗೆ ಇರುತ್ತದೆ. ಹಾಗಾಗಿ ಅದು ದಾಳಿ ಮಾಡುತ್ತದೆ. ನೀನು ಒಂಟಿ ಸಲಗವಾಗಿದ್ದರೂ ಪರೋಪಕಾರಿಯಾಗಿರು’ ಎಂದು ದುನಿಯಾ ವಿಜಯ್‌ಗೆ ಹೇಳಿದರು.

ಬಳಿಕ ಸಿನಿಮಾ ತಂಡಕ್ಕೆ ಶುಭ ಹಾರೈಸಿದ ಸಿದ್ದರಾಮಯ್ಯ ‘ನಾನು ಚಿಕ್ಕಂದಿನಲ್ಲಿ ಇದ್ದಾಗ ದಿನಕ್ಕೆ ಒಂದಾದರೂ ಸಿನಿಮಾ ನೋಡುತ್ತಿದ್ದೆ. ಆದರೆ ಈಗ ಎರಡು ವರ್ಷಕ್ಕೆ ಒಂದು ಸಿನಿಮಾ ನೋಡುವಂತೆ ಆಗಿದೆ. ನಿರ್ದೇಶನ ಮಾಡಬೇಕಿದ್ದರೆ ಎಲ್ಲವನ್ನೂ ತಿಳಿದುಕೊಂಡಿರಬೇಕು. ಯಾವ ವಿಷಯವನ್ನು ಹೇಳಬೇಕು ಎಂಬುದು ನಿರ್ದೇಶಕನಾದವನಿಗೆ ಗೊತ್ತಿರಬೇಕು’ ಎಂದು ತಿಳಿಸಿದರು.