ವಿಧಾನಪರಿಷತ್ ಸದಸ್ಯ ಹಾಗೂ ಕುರುಬ ಸಮುದಾಯಕ್ಕೆ ಸೇರಿದ ಎಚ್.ಎಂ.ರೇವಣ್ಣ ಅವರಿಗೆ ಸಂಪುಟದಲ್ಲಿ ಈ ಬಾರಿ ಅವಕಾಶ ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಸಾರಿಗೆ ಖಾತೆಯ ಜವಾಬ್ದಾರಿ ರೇವಣ್ಣನವರ ಹೆಗಲಿಗೇರಬಹುದು.
ಬೆಂಗಳೂರು(ಜೂನ್ 08): ಸಿಎಂ ಸಿದ್ದರಾಮಯ್ಯನವರ ಸಂಪುಟದಿಂದ ಮೂವರನ್ನು ಕೈಬಿಡುವ ಸಾಧ್ಯತೆ ಇದೆ. ಸಂಪುಟ ವಿಸ್ತರಣೆ ಬದಲು ಸರಕಾರವು ಸಂಪುಟ ಪುನಾರಚನೆಗೆ ನಿರ್ಧಿರಿಸಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಸಮರ್ಪಕವಾಗಿ ಕಾರ್ಯನಿರ್ವಹಿಸದ ಮೂವರು ಸಚಿವರಿಗೆ ಸಂಪುಟದಿಂದ ಕೊಕ್ ನೀಡಿ ಅವರ ಜಾಗಕ್ಕೆ ಹೊಸಬರನ್ನು ಕೂರಿಸುವ ಚಿಂತನೆ ನಡೆದಿದೆ. ಇನ್ನು ಕೆಲ ಸಚಿವರ ಸ್ಥಾನಪಲ್ಲಟವಾಗುವ ಸಾಧ್ಯತೆಯೂ ಇದೆ. ಮೂಲಗಳ ಪ್ರಕಾರ, ಜಿ.ಪರಮೇಶ್ವರ್ ಅವರಿಂದ ತೆರವಾಗುವ ಗೃಹ ಖಾತೆಯ ಹೊಣೆಯನ್ನು ಈಗಿನ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ವಹಿಸುವ ಸಾಧ್ಯತೆ ಇದೆ. ವಿಧಾನಪರಿಷತ್ ಸದಸ್ಯ ಹಾಗೂ ಕುರುಬ ಸಮುದಾಯಕ್ಕೆ ಸೇರಿದ ಎಚ್.ಎಂ.ರೇವಣ್ಣ ಅವರಿಗೆ ಸಂಪುಟದಲ್ಲಿ ಈ ಬಾರಿ ಅವಕಾಶ ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಸಾರಿಗೆ ಖಾತೆಯ ಜವಾಬ್ದಾರಿ ರೇವಣ್ಣನವರ ಹೆಗಲಿಗೇರಬಹುದು.
ಸಂಪುಟದಿಂದ ಹೊರಹೋಗಲಿರುವ ಮೂವರು ಸಚಿವರು ಯಾರು ಎಂಬುದರ ಸುಳಿವು ಇನ್ನೂ ಸಿಕ್ಕಿಲ್ಲ. ಇನ್ನು, ಸಂಪುಟಕ್ಕೆ ಸೇರ್ಪಡೆಯಾಗುವ ಮೂವರು ಹೊಸ ಮುಖಗಳಲ್ಲಿ ಹಿರಿಯ ನಾಯಕ ಎಚ್.ಎಂ.ರೇವಣ್ಣನವರ ಹೆಸರು ಕೇಳಿಬರುತ್ತಿದೆ. ಇನ್ನಿಬ್ಬರು ಯಾರು ಎಂಬುದು ಗೊತ್ತಾಗಬೇಕಿದೆ. ಅಧಿವೇಶನದ ಬಳಿಕ ಮುಖ್ಯಮಂತ್ರಿಗಳು ಸಂಪುಟ ಪುನಾರಚನೆಯ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
(ಫೋಟೋ: ರಾಮಲಿಂಗಾ ರೆಡ್ಡಿಯವರದ್ದು)
