ಕುಂದಗೋಳ[ಏ.04]: ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ನಿಧನದಿಂದ ತೆರವಾಗಿದ್ದ ಕುಂದಗೋಳ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣಾ ಸಮರಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮುಖಂಡರು ಶುಕ್ರವಾರ ಸಂಜೆ ಶಕ್ತಿ ಪ್ರದರ್ಶನದ ಮೂಲಕ ರಣಕಹಳೆ ಮೊಳಗಿಸಿದರು.

ತಾಲೂಕಿನ ಕ್ಷೇತ್ರದ ಸಂಶಿ ಗ್ರಾಮದ ಹೈಸ್ಕೂಲ್‌ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಸಮಾವೇಶದಲ್ಲಿ ಮಾತನಾಡಿದ ಮುಖಂಡರೆಲ್ಲರೂ, ಶಿವಳ್ಳಿ ಆತ್ಮಕ್ಕೆ ಗೌರವ ಸಲ್ಲಿಸಬೇಕೆಂದರೆ ಶಿವಳ್ಳಿ ಪತ್ನಿಗೆ ಮತ ಚಲಾಯಿಸಬೇಕು. ದಿ.ಸಿ.ಎಸ್‌.ಶಿವಳ್ಳಿ ಸ್ಥಾನವನ್ನು ಅವರ ಪತ್ನಿ ಕುಸುಮಾವತಿ ಅವರು ತುಂಬಬೇಕೆಂಬುದು ಕಾಂಗ್ರೆಸ್‌ ಅಭಿಪ್ರಾಯ. ಈ ನಿಟ್ಟಿನಲ್ಲಿ ತಾವೆಲ್ಲರೂ ಮನವಿಟ್ಟು ಕೆಲಸ ಮಾಡಬೇಕೆಂದು ಕರೆ ನೀಡಿದರು.

ಸಮಾವೇಶ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಳ್ಳಿ ದೈಹಿಕವಾಗಿ ದೂರವಾಗಿದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ. ಶಿವಳ್ಳಿ ಇಷ್ಟುಬೇಗ ನಮ್ಮನ್ನು ಅಗಲುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅಕಾಲಿಕವಾಗಿ ನಿಧನರಾಗಿದ್ದಾರೆ. ಕುಸುಮಾವತಿ ಶಿವಳ್ಳಿ ತಮಗೆ ಟಿಕೆಟ್‌ ನೀಡುವಂತೆ ಎಂದು ಕೇಳಿರಲಿಲ್ಲ. ನಾವೇ ಶಿವಳ್ಳಿ ಸ್ಥಾನ ಕುಸುಮಾವತಿ ಅವರೇ ತುಂಬಲಿ ಎಂಬ ಉದ್ದೇಶದಿಂದ ಅವರಿಗೆ ಕೇಳಿಕೊಂಡು ಚುನಾವಣೆಗೆ ನಿಲ್ಲಿ ಎಂದು ಟಿಕೆಟ್‌ ಕೊಟ್ಟಿದ್ದೇವೆ. ಇದು ನಮ್ಮ ಚುನಾವಣೆಯಲ್ಲ. ಕುಸುಮಾವತಿ ಇಲ್ಲಿ ಅಭ್ಯರ್ಥಿಯಲ್ಲ. ನೀವೇ ಇಲ್ಲಿ ಅಭ್ಯರ್ಥಿ. ಇದು ನಿಮ್ಮ ಸ್ವಾಭಿಮಾನದ ಚುನಾವಣೆ. ಈ ಚುನಾವಣೆಯಲ್ಲಿ ಸುಳ್ಳು ಹೇಳುವವರ ಮಾತು ಕೇಳದೇ ಶಿವಳ್ಳಿ ಪತ್ನಿ ಕುಸುಮಾವತಿ ಅವರಿಗೆ ಮತ ಚಲಾಯಿಸುವ ಮೂಲಕ ಶಿವಳ್ಳಿ ಆತ್ಮಕ್ಕೆ ಗೌರವ ಸಲ್ಲಿಸಿ ಎಂದು ಮನವಿ ಮಾಡಿದರು.

ಸಚಿವ ಡಿ.ಕೆ.ಶಿವಕುಮಾರ ಮಾತ​ನಾಡಿ, ಇದು ಕುಸುಮಾವತಿ ಶಿವಳ್ಳಿ ಚುನಾವಣೆಯಲ್ಲ. ಡಿ.ಕೆ.ಶಿವಕುಮಾರ ಚುನಾವಣೆ. ನಾನು ಶಿವಳ್ಳಿ ಅಂತ್ಯಕ್ರಿಯೆಗೆ ಬಂದಾಗ ಹೇಳಿದ್ದೆ. ನಾನು ಶಿವಳ್ಳಿ ಕುಟುಂಬವನ್ನು ಕೈಬಿಡಲ್ಲ ಎಂದು ಹೇಳಿದ್ದೆ. ಅದನ್ನು ಈ ಚುನಾವಣೆಯಲ್ಲಿ ಕುಸುಮಾವತಿ ಅವರನ್ನು ಗೆಲ್ಲಿಸುವ ಮೂಲಕ ಮಾಡಿ ತೋರಿಸುತ್ತೇನೆ ಎಂದು ಹೇಳಿ​ದ​ರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಮಾತ​ನಾ​ಡಿ, ಅನುಕಂಪದ ಅಲೆ ಇದೆ ಎಂದು ಮೈ ಮರೆಯಬೇಡಿ. ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ಪ್ರತಿಯೊಬ್ಬರು ಪ್ರತಿಯೊಬ್ಬ ಮತದಾರರನ್ನು ಸಂಪರ್ಕಿಸಿ. ಹತ್ತು ಮನೆ ಮನೆಗಳನ್ನು ಆಯ್ಕೆ ಮಾಡಿಕೊಂಡು ಪ್ರಚಾರ ನಡೆಸಿ ಎಂದು ನುಡಿದರು.