ತುಮಕೂರು :  ಕಳೆದೊಂದು ವಾರದಿಂದ ಪಿತ್ತಕೋಶ ಮತ್ತು ಯಕೃತ್ತಿನ ಸೋಂಕಿನಿಂದ ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಶ್ರೀಗಳನ್ನು ಗುರುವಾರ ಸಂಜೆ ಸ್ಪೆಷಲ್‌ ವಾರ್ಡ್‌ಗೆ ಶಿಫ್ಟ್‌ ಮಾಡಲಾಯಿತು.

ರಾತ್ರಿ ರೆಲಾ ಆಸ್ಪತ್ರೆ ವೈದ್ಯ ಮೊಹಮದ್‌ ರೆಲಾ ಅವರು ಶ್ರೀಗಳನ್ನು ತಪಾಸಣೆ ನಡೆಸಿ ಸ್ಪೆಷಲ್‌ ವಾರ್ಡ್‌ಗೆ ಶಿಫ್ಟ್‌ ಮಾಡುವ ನಿರ್ಧಾರಕ್ಕೆ ಬಂದರು. ಕಳೆದ ಶುಕ್ರವಾರ ಶ್ರೀಗಳನ್ನು ಚೆನ್ನೈನ ರೆಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದುದ್ದರಿಂದ ಶನಿವಾರ ರೆಲಾ ಅವರು ಯಶಸ್ವಿಯಾಗಿ ಬೈಪಾಸ್‌ ಮಾದರಿಯ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದರು. ಶಸ್ತ್ರ ಚಿಕಿತ್ಸೆ ನೆರವೇರಿದ ಎರಡು ದಿನಗಳಲ್ಲೇ ಶ್ರೀಗಳು ಚೇತರಿಸಿಕೊಂಡಿದ್ದು ಸ್ವತಃ ಚೆನ್ನೈನ ರೆಲಾ ಆಸ್ಪತ್ರೆ ವೈದ್ಯರಿಗೆ ಅಚ್ಚರಿ ತಂದಿತ್ತು.

ಶಸ್ತ್ರ ಚಿಕಿತ್ಸೆ ಬಳಿಕ ಮೂರು ದಿನ ಶ್ರೀಗಳಿಗೆ ಗ್ಲೂಕೋಸ್‌ ನೀಡಲಾಗಿತ್ತು. ಮೊನ್ನೆಯಿಂದ ದ್ರವರೂಪದ ಆಹಾರ ನೀಡಲಾಗುತ್ತಿದೆ. ಈಗಾಗಲೇ ಶ್ರೀಗಳು ಜ್ಯೂಸ್‌ ಮತ್ತು ಎಳನೀರು ಸೇವಿಸುತ್ತಿದ್ದಾರೆ. ಇನ್ನು ಒಂದೆರೆಡು ದಿನದಲ್ಲಿ ಘನ ರೂಪದ ಆಹಾರ ನೀಡಲಾಗುವುದು. ಈಗಾಗಲೇ ಶ್ರೀಗಳ ಆರೋಗ್ಯ ಗಣನೀಯವಾಗಿ ಚೇತರಿಸಿಕೊಂಡಿದ್ದು, ಇನ್ನೊಂದು ವಾರದಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಸಿದ್ಧಗಂಗಾ ಮಠಕ್ಕೆ ಕಳುಹಿಸಲಾಗುವುದು.

ಶ್ರೀಗಳ ಒತ್ತಾಯದ ಮೇರೆಗೆ ಐಸಿಯುನಲ್ಲೇ ಅವರಿಗೆ ಇಷ್ಟಲಿಂಗ ಪೂಜೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿತ್ತು. ಈಗ ಸ್ಪೆಷಲ್‌ ವಾರ್ಡ್‌ಗೆ ಹೋದ ಕೂಡಲೇ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.

ಸಿದ್ಧಗಂಗಾ ಶ್ರೀಗಳನ್ನು ನೋಡಲು, ಮಾತನಾಡಿಸಲು ಗುರುವಾರ ಸಹ ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತಾದಿಗಳು ಆಗಮಿಸಿದ್ದಾರೆ. ಆದರೆ ಶ್ರೀಗಳಿಗೆ ವೈದ್ಯರು ಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದರಿಂದ ಭಕ್ತರಿಗೆ ವಾರ್ಡ್‌ನೊಳಗೆ ಪ್ರವೇಶ ನಿರಾಕರಿಸಲಾಗಿತ್ತು. ಸಿದ್ಧಗಂಗಾ ಕಿರಿಯ ಶ್ರೀಗಳು ಮಾತನಾಡಿ ಶ್ರೀಗಳಿಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಭಕ್ತರು ಚೆನ್ನೈಗೆ ಬರುವುದು ಬೇಡ. ಎರಡು ವಾರಗಳ ಬಳಿಕ ಶ್ರೀಗಳೇ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಅಲ್ಲಿಯವರೆಗೂ ಭಕ್ತರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಮತ್ತೆ ವಾಕಿಂಗ್‌: ಗುರುವಾರ ಸಹ ಶ್ರೀಗಳಿಗೆ ಮತ್ತೆ ವಾಕಿಂಗ್‌ ಮಾಡಿಸಲಾಯಿತು. ಸುಮಾರು ಐದು ನಿಮಿಷ ಕಾಲ ವಾಕಿಂಗ್‌ ಮಾಡಿಸಿ ಬಳಿಕ ಸ್ಪೆಷಲ್‌ ವಾರ್ಡ್‌ಗೆ ಸ್ಥಳಾಂತರಗೊಳಿಸಲಾಯಿತು.

ನಡೆ​ದಾ​ಡಿದ ದೇವರು: ಸಿದ್ಧಗಂಗಾ ಶ್ರೀಗಳಿಂದ ಇಷ್ಟಲಿಂಗ ಪೂಜೆ