ಈ ಹಿಂದೆ ಎಂ.ಬಿ ಪಾಟೀಲ್ ಪ್ರತ್ಯೇಕ ಧರ್ಮಕ್ಕೆ ಶ್ರೀಗಳ ಬೆಂಬಲವಿದೆ ಎಂದು ಹೇಳಿದ್ದರು. ಈ ಬಗ್ಗೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆದದ್ದು, ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ತುಮಕೂರು ಮಠದ ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ತುಮಕೂರು(ಸೆ.12): ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಎಂದು ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ಸಚಿವ ಎಂ.ಬಿ. ಪಾಟೀಲ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಿದ್ದಗಂಗ ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ಎಂ.ಬಿ ಪಾಟೀಲ್ ಪ್ರತ್ಯೇಕ ಧರ್ಮಕ್ಕೆ ಶ್ರೀಗಳ ಬೆಂಬಲವಿದೆ ಎಂದು ಹೇಳಿದ್ದರು. ಈ ಬಗ್ಗೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆದದ್ದು, ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ತುಮಕೂರು ಮಠದ ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದು ಎಂ.ಬಿ. ಪಾಟೀಲ್'ಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.

ಹೀಗಿದೆ ಶ್ರೀಗಳು ಹೊರಡಿಸಿದ ಪತ್ರಿಕಾ ಪ್ರಕಟಣೆ:

ಶ್ರೀಗಳ ಪತ್ರಿಕಾ ಪ್ರಕಟಣೆ

ದಿನಾಂಕ 10-09-2017ರಂದು ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್​​'ರವರು ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದಾಗ ಅವರು ನಮ್ಮೊಡನೆ ವೀರಶೈವ / ಲಿಂಗಾಯತ ಸ್ವತಂತ್ರ ಧರ್ಮದ ವಿಷಯದ ಬಗ್ಗೆ ಚರ್ಚಿಸಿದಾಗ ವೀರಶೈವ ಎಂಬ ಪದ ವಿದ್ಯಾವಂತರು ಮತ್ತು ನಗರ ಪ್ರದೇಶದಲ್ಲಿ ಬಳಕೆಯಲ್ಲಿದೆ. ಲಿಂಗಾಯತ ಎಂಬ ಪದ ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದ್ದು, ಈ ಎರಡೂ ಪದಗಳು ಒಂದೇ ಆಗಿದ್ದು, ಎಲ್ಲಾ ಧಾರ್ಮಿಕ ಮುಖಂಡರು ಹಾಗೂ ಸಮಾಜ ಬಾಂಧವರು ಒಂದೆಡೆ ಕುಳಿತು ಸರ್ವ ಸಮ್ಮತವಾದ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ನಮ್ಮ ಅಭಿಪ್ರಾಯ ತಿಳಿಸಿರುತ್ತೇವೆ. ಆದರೆ ಮಾನ್ಯ ಶ್ರೀ ಎಂ.ಬಿ.ಪಾಟೀಲ್​​​​​ ಅವರು ಲಿಂಗಾಯತ ಪದದ ಪರವಾಗಿ ಬೆಂಬಲ ಸೂಚಿಸಿದ್ದಾರೆ ಎಂಬಂತೆ ಮಾಧ್ಯಮಗಳಲ್ಲಿ ಪ್ರಕಟಿಸಿರುವುದು ತಿಳಿದು ಬಂದಿದೆ. ಸಮಾಜವನ್ನು ಈ ರೀತಿ ಇಬ್ಭಾಗ ಮಾಡುವ ರೀತಿಯಲ್ಲಿ ಯಾರೇ ಪ್ರಯತ್ನಿಸಿದ್ರೂ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಸಮಾಜದ ಮುಖಂಡರೆಲ್ಲ ಕುಳಿತು ಚರ್ಚಿಸಿ ಒಮ್ಮತ ರೂಪಿಸುವುದು ಅತ್ಯಂತ ಅಗತ್ಯವಾಗಿದೆ.

ಶ್ರೀ ಶಿವಕುಮಾರ ಸ್ವಾಮಿಗಳು

ಶ್ರೀ ಸಿದ್ಧಗಂಗಾ ಮಠ