ವೀರಶೈವ-ಲಿಂಗಾಯತ ಧರ್ಮ ಯುದ್ಧ ಜೋರಾಗಿದೆ. ಸಿದ್ದಗಂಗಾ ಶ್ರೀಗಳ ಹೇಳಿಕೆ ವಿಚಾರದಲ್ಲಿ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆಗೆ ಸಿದ್ದಗಂಗಾ ಮಠ ಸ್ಪಷ್ಟನೆ ನೀಡಿದ್ದರೂ ಸಚಿವ ಪಾಟೀಲ್ ಮಾತ್ರ ಪಟ್ಟು ಸಡಿಲಿಸುತ್ತಿಲ್ಲ. ಈ ಸಂಬಂಧ ಸಿದ್ಧಗಂಗಾ ಮಠ ಮತ್ತೆ 2ನೇ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರು(ಸೆ.13): ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಪಟ್ಟು ಹಿಡಿದಿರುವ ಸಚಿವ ಎಂ.ಬಿ.ಪಾಟೀಲರಿಗೆ ಭಾರೀ ಹಿನ್ನಡೆಯಾಗಿದೆ. ತಮ್ಮ ಹೇಳಿಕೆಯನ್ನು ಲಿಂಗಾಯತ ಧರ್ಮದ ಪರ ಎಂದು ಎಂ.ಬಿ.ಪಾಟೀಲರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಿದ್ಧಗಂಗಾ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಇದನ್ನು ದೃಢಿಕರಿಸುತ್ತಾ ಸಿದ್ಧಗಂಗಾ ಶ್ರೀಗಳು 2ನೇ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.
ಸಿದ್ಧಗಂಗಾ ಶ್ರೀಗಳ 2ನೇ ಪತ್ರಿಕಾ ಪ್ರಕಟಣೆ
ಮಾನ್ಯ ಸಚಿವರಾದ ಎಂ.ಬಿ.ಪಾಟೀಲರು ತಮ್ಮ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ತಿರುಚಿ ಲಿಂಗಾಯತ ಧರ್ಮದ ಪರವಾಗಿದ್ದಾರೆ ಎಂದು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿರುವುದು ದುರದೃಷ್ಟಕರ ಮತ್ತು ಇದು ಅಪ್ರಸ್ತುತ. ಒಂದು ವೇಳೆ ವೀರಶೈವ-ಲಿಂಗಾಯತ ಸಮಾಜವನ್ನು ಇಬ್ಭಾಗ ಮಾಡಲು ಯಾರೇ ಪ್ರಯತ್ನ ಮಾಡಿದರೂ ಅದು ಸಮಾಜಕ್ಕೆ ಒಳಿತಲ್ಲ. ಆದ್ದರಿಂದ ವೀರಶೈವ-ಲಿಂಗಾಯತ ಪದಗಳು ಎರಡೂ ಒಂದೇ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ. ಸಮಾಜ ಕೂಡ ಇದೇ ಅಂತಿಮ ಎಂದು ಭಾವಿಸುವುದು ಒಳಿತು. ಈ ಕುರಿತು ಅಖಿಲ ಭಾರತ ವೀರಶೈವ ಮಹಾಸಭೆ ನಿರ್ಣಯ ಸಹ ಸರಿಯಾದ ನಡೆ. ಅದನ್ನು ನಾವು ಕೂಡ ಪುಷ್ಠಿಕರಿಸುತ್ತೇವೆ.
- ಶ್ರೀ ಶಿವಕುಮಾರಸ್ವಾಮಿಗಳು
ಭಾರೀ ಮುಖಭಂಗ ಅನುಭವಿಸಿದ ಎಂ.ಬಿ.ಪಾಟೀಲರು ಮಾತ್ರ ತಮ್ಮ ನಿಲುವಿಗೆ ಜೋತು ಬಿದ್ದಿದ್ದಾರೆ. ಈ ಮಧ್ಯೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮ ಕ್ಷೇತ್ರಕ್ಕೆ ಪಾಟೀಲರು ಭೇಟಿ ನೀಡಿದರು. ಬಸವಣ್ಣನವರ ಐಕ್ಯ ಮಂಟಪಕ್ಕೆ ಮಂಡಿಯೂರಿ ನಮಸ್ಕರಿಸಿ, ಕೆಲ ಹೊತ್ತು ಅಲ್ಲಿಯೇ ಧ್ಯಾನ ಮಾಡಿದರು. ಸಚಿವರಿಗೆ ಹುನಗುಂದ ಶಾಸಕ ವಿಜಯಾನಂದ್ ಕಾಶಪ್ಪನವರ ಸಾಥ್ ನೀಡಿದ್ರು. ಆದ್ರೆ ಸಚಿವರ ಈ ದಿಢೀರ್ ಭೇಟಿ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಒಟ್ಟಾರೆ ಲಿಂಗಾಯತ-ವೀರಶೈವ ಧರ್ಮ ಯುದ್ಧ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.
