ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. 

ತುಮಕೂರು : ಯಕೃತ್ತು ಮತ್ತು ಪಿತ್ತನಾಳದ ಸಮಸ್ಯೆಯಿಂದಾಗಿ ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಮಂಗಳವಾರ ಸಂಜೆ ಅಥವಾ ಬುಧವಾರ ಬೆಳಗ್ಗೆ ಅವರನ್ನು ಐಸಿಯುನಿಂದ ವಾರ್ಡ್‌ಗೆ ಶಿಫ್ಟ್‌ ಮಾಡುವ ಸಾಧ್ಯತೆ ಇದೆ ಮಠದ ಕಿರಿಯ ಸ್ವಾಮೀಜಿಗಳಾದ ಸಿದ್ಧಲಿಂಗ ಶ್ರೀಗಳು ತಿಳಿಸಿದ್ದಾರೆ.

ಬೈಪಾಸ್‌ ಮಾದರಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಶ್ರೀಗಳಿಗೆ ಈವರೆಗೆ ಗ್ಲೂಕೋಸ್‌ ನೀಡಲಾಗಿತ್ತು. ಆದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ದ್ರವರೂಪದ ಆಹಾರ ನೀಡಲಾಗುತ್ತಿದೆ. ಇಷ್ಟಲಿಂಗ ಪೂಜೆ ಮಾಡಬೇಕೆಂದು ಶ್ರೀಗಳು ಹೇಳುತ್ತಿರುವುದರಿಂದ ವಾರ್ಡ್‌ಗೆ ಶಿಫ್ಟ್‌ ಆದ ಮೇಲೆ ಅವಕಾಶ ಕಲ್ಪಿಸಲು ವೈದ್ಯರು ಸಮ್ಮತಿಸಿದ್ದಾರೆ. ಶ್ರೀಗಳ ಆರೋಗ್ಯವನ್ನು ಮತ್ತೊಮ್ಮೆ ತಪಾಸಣೆ ಮಾಡಿ ಮುಂದಿನ ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಕರೆದುಕೊಂಡು ಬರಲಾಗುವುದು ಎಂದು ಹೇಳಿದರು.

ಪ್ರಸಾದ ತಂದ ಭಕ್ತರು: ಶ್ರೀಗಳ ಆರೋಗ್ಯ ವಿಚಾರಿಸಲು ಸಿದ್ಧಗಂಗೆಗೆ ಬರುವ ಹಾಗೆ ರಾಜ್ಯದಿಂದಲೂ ಭಕ್ತರ ದಂಡು ಚೆನ್ನೈನತ್ತ ಪ್ರತಿ ದಿನವೂ ಬರುತ್ತಿದೆ. ಆಸ್ಪತ್ರೆ ಒಳಗಡೆ ಪ್ರವೇಶ ನಿರಾಕರಿಸಿರುವುದರಿಂದ ಆಸ್ಪತ್ರೆ ಮುಂಭಾಗವೇ ಭಕ್ತರು ಕೈ ಮುಗಿದು ಹೊರಡುತ್ತಿದ್ದಾರೆ. ಈಗಾಗಲೇ ಶ್ರೀಗಳ ಆರೋಗ್ಯಕ್ಕಾಗಿ ಭಕ್ತವೃಂದ ಯಡಿಯೂರಿನ ಸಿದ್ಧಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಕ್ಷೀರಾಭಿಷೇಕ, ಎಳನೀರು ಅಭಿಷೇಕವನ್ನು ಮಾಡಿಸಿ ಪ್ರಸಾದವನ್ನು ಯಡಿಯೂರಿನಿಂದ ಮಡಿಯಲ್ಲೇ ಭಕ್ತರು ಚೆನ್ನೈ ಗೆ ತಂದು ಶ್ರೀಗಳಿಗೆ ಅರ್ಪಿಸಿದ್ದಾರೆ. ಆದರೆ ಇದಕ್ಕೆ ವೈದ್ಯರು ಅವಕಾಶ ಕೊಟ್ಟಿಲ್ಲ. ಕಡೆಗೆ ಶ್ರೀಗಳ ಹೆಸರಿನಲ್ಲಿ ಮಾಡಿಸಿದ ಪೂಜೆ ಅವರಿಗೆ ಸಲ್ಲುತ್ತದೆ, ಪ್ರಸಾದ ಸ್ಪರ್ಶವಾದರೂ ಅವರಿಗಾದರೆ ಸಾಕು ಎಂದು ಭಕ್ತರು ಕೇಳಿಕೊಂಡ ಮೇಲೆ, ಪ್ರಸಾದವನ್ನು ಶ್ರೀಗಳಿಗೆ ಸ್ಪರ್ಶಿಸಲು ಅವಕಾಶ ಕಲ್ಪಿಸಿದ್ದಾರೆ.

ಇಂತಹ ಆಪರೇಷನ್‌ ಇದೇ ಮೊದಲು: ಪರಂ

111ರ ಈ ಇಳಿ ವಯಸ್ಸಿನಲ್ಲಿ ವ್ಯಕ್ತಿಯೊಬ್ಬರು ಇಂತಹ ದೊಡ್ಡ ಆಪರೇಷನ್‌ಗೆ ಒಳಗಾಗಿರುವುದು ಪ್ರಪಂಚದಲ್ಲೇ ಇದೇ ಮೊದಲು ಎಂದು ರೆಲಾ ಆಸ್ಪತ್ರೆ ವೈದ್ಯ ಮೊಹಮದ್‌ ರೆಲಾ ತಮ್ಮ ಬಳಿ ಹೇಳಿದ್ದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. 

ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ನಾನು ಕೂಡ ಅವರ ಜೊತೆ ಮಾತನಾಡಿದ್ದು ಲವಲವಿಕೆಯಿಂದ ಇದ್ದಾರೆ. 

ಇಂತಹ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ ಮೊಹಮದ್‌ ರೆಲಾ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.