ಬೆಂಗಳೂರು :  ತುಮಕೂರಿನ ಸಿದ್ಧಗಂಗಾ ಮಠದ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಸೋಮವಾರ ಬೆಳಗ್ಗೆ ಮತ್ತೊಂದು ಸುತ್ತಿನ ರಕ್ತ ತಪಾಸಣೆ ನಡೆಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಬಗ್ಗೆ ವೈದ್ಯರು ನಿರ್ಧಾರ ಕೈಗೊಳ್ಳಲಿದ್ದಾರೆ.

ಪಿತ್ತನಾಳದ ಸೋಂಕು ನಿವಾರಣೆಗಾಗಿ ವೈದ್ಯರು ಶ್ರೀಗಳಿಗೆ ಪಿತ್ತನಾಳ ಭಾಗದಲ್ಲಿ ಮತ್ತೆರಡು ಸ್ಟೆಂಟ್‌ ಅಳವಡಿಸಿದ್ದಾರೆ. ಬಳಿಕ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಸೋಂಕು ಕಡಿಮೆಯಾಗಿದೆ. ಆದರೆ, ರಕ್ತದಲ್ಲಿ ಹೆಚ್ಚಿನ ಸೋಂಕು ಇದ್ದಿದ್ದರಿಂದ ನಿವಾರಣೆಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. 

ಸೋಮವಾರ ಬೆಳಗಿನವರೆಗೆ ಶ್ರೀಗಳ ಆರೋಗ್ಯದ ಮೇಲೆ ನಿಗಾವಹಿಸಲು ವೈದ್ಯರು ನಿರ್ಧರಿಸಿದ್ದು, ಬೆಳಗ್ಗೆ ಮತ್ತೊಂದು ಸುತ್ತಿನ ರಕ್ತಪರೀಕ್ಷೆ ಹಾಗೂ ಇತರೆ ಆರೋಗ್ಯ ತಪಾಸಣೆಗಳನ್ನು ನಡೆಸಿ ಆಸ್ಪತ್ರೆಯಿಂದ ಮಠಕ್ಕೆ ಕಳುಹಿಸುವ ಬಗ್ಗೆ ನಿರ್ಧರಿಸಲು ತೀರ್ಮಾನಿಸಿದ್ದಾರೆ.

ಬೆಳಗ್ಗೆ 5ಕ್ಕೆ ಮತ್ತೆ ರಕ್ತ ಪರೀಕ್ಷೆ:  ಶಿವಕುಮಾರ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಬಿಜಿಎಸ್‌ ಆಸ್ಪತ್ರೆ ವೈದ್ಯರ ತಂಡದ ಮುಖ್ಯಸ್ಥ ಡಾ.ರವೀಂದ್ರ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳು ಪಿತ್ತನಾಳ ಮತ್ತು ಪ್ಯಾಂಕ್ರಿಯಾಸಿಸ್‌ ಸೋಂಕಿನಿಂದ ಬಳಲುತ್ತಿರುವುದು ತಪಾಸಣೆ ವೇಳೆ ಕಂಡು ಬಂದಿದ್ದರಿಂದ ಪಿತ್ತನಾಳದಲ್ಲಿ ಮತ್ತೆರಡು ಸ್ಟೆಂಟ್‌ ಅಳವಡಿಸಲಾಗಿದೆ. ಈಗಾಗಲೇ ಕಳೆದ ಎರಡೂವರೆ ವರ್ಷದಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸದೆ ಎಂಡೋಸ್ಕೋಪಿ ತಂತ್ರಜ್ಞಾನದ ಮೂಲಕವೇ ಪಿತ್ತನಾಳದ ಭಾಗಕ್ಕೆ ಒಂಬತ್ತು ಟ್ಯೂಬ್‌ಗಳನ್ನು ಅಳವಡಿಸಲಾಗಿತ್ತು ಎಂದು ತಿಳಿಸಿದರು.

ಸಿಟಿ ಸ್ಕ್ಯಾನ್‌ನಲ್ಲಿ ಎರಡು ಸ್ಟೆಂಟ್‌ಗಳು ಉದುರಿ ಹೋಗಿದ್ದು, ಏಳು ಸ್ಟೆಂಟ್‌ಗಳು ಮಾತ್ರ ಇರುವುದು ಕಂಡು ಬಂದಿತ್ತು. ಎಂಥದ್ದೇ ಸ್ಟೆಂಟ್‌ ಆದರೂ ಅದು ಆರು ತಿಂಗಳು ಮಾತ್ರ ಬಾಳಿಕೆ ಬರುತ್ತದೆ. ಶ್ರೀಗಳಿಗೆ ವಯಸ್ಸಾಗಿರುವ ಕಾರಣ ಈ ಬಾರಿಯೂ ತುಂಬಾ ಜಾಗರೂಕತೆ ವಹಿಸಿ ಎಂಡೋಸ್ಕೋಪಿ ಮೂಲಕವೇ ಮತ್ತೆರಡು ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ. ಬಳಿಕ ಆರೋಗ್ಯ ಸುಧಾರಿಸಿದೆ ಎಂದು ಹೇಳಿದರು.

ಈ ಮೊದಲು ಸ್ಟೆಂಟ್‌ ಅಳವಡಿಸಿದ್ದ ಜಾಗದಲ್ಲೇ ಸೋಂಕು ಕಂಡುಬಂದಿತ್ತು. ಸ್ಟೆಂಟ್‌ ಅಳವಡಿಕೆ ಬಳಿಕ ಪಿತ್ತನಾಳದ ಸೋಂಕು ಕಡಿಮೆಯಾಗಿದೆ. ಪಿತ್ತರಸ ಚೆನ್ನಾಗಿ ಉತ್ಪತ್ತಿಯಾಗುತ್ತಿದೆ. ಇನ್ನು ರಕ್ತದಲ್ಲಿ ಕಂಡುಬಂದಿರುವ ಸೋಂಕು ನಿವಾರಣೆಗೆ ಆ್ಯಂಟಿಬಯೋಟಿಕ್‌ ಔಷಧ ನೀಡಲಾಗಿದೆ. ರಕ್ತದಲ್ಲಿ ಸ್ವಲ್ಪ ಹೆಚ್ಚಿನ ಸೋಂಕು ಕಂಡುಬಂದಿದ್ದರಿಂದ ಸೋಮವಾರ ಬೆಳಗ್ಗೆವರೆಗೆ ಇಡೀ ರಾತ್ರಿ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. 

ಮತ್ತೊಮ್ಮೆ ಸ್ಟೆಂಟ್‌ ಅಳವಡಿಸಿರುವುದು ಪವಾಡವೇ ಸರಿ. ಸತತ ಒಂದೂವರೆ ಗಂಟೆ ಕಾಲ ಅನಸ್ತೇಶಿಯಾ ಮೂಲಕ ನಡೆಸಿದ ಸ್ಟೆಂಟ್‌ ಅಳವಡಿಕೆ ಚಿಕಿತ್ಸೆಗೆ ಶ್ರೀಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ಸಾಮಾನ್ಯವಾಗಿ ಸ್ಟೆಂಟ್‌ ಅಳವಡಿಕೆ ಬಳಿಕ ಐಸಿಯುಗೆ ವರ್ಗಾಯಿಸುವುದು ಸಾಮಾನ್ಯ. ಆದರೆ, ಶ್ರೀಗಳು ವಾರ್ಡ್‌ಗೆ ತೆರಳಿದರು. ಅನಸ್ತೇಶಿಯಾ ಪರಿಣಾಮ ಸಂಪೂರ್ಣ ಕಡಿಮೆಯಾದ ಬಳಿಕ ಆಸ್ಪತ್ರೆಯಲ್ಲೇ ಶಿವಪೂಜೆ ನೆರವೇರಿಸಿದ್ದು, ಆಹಾರ ಸೇವಿಸಿದ್ದಾರೆ ಎಂದು ತಿಳಿಸಿದರು.