ರಾಷ್ಟ್ರಪತಿ ಚುನಾವಣೆಯನ್ನು ದಲಿತ v/s ದಲಿತ ನಡುವಿನ ಸ್ಪರ್ಧೆ ಎಂದು ಬಿಂಬಿಸುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಹೇಳಿದ್ದಾರೆ.
ಬೆಂಗಳೂರು (ಜು.01): ರಾಷ್ಟ್ರಪತಿ ಚುನಾವಣೆಯನ್ನು ದಲಿತ v/s ದಲಿತ ನಡುವಿನ ಸ್ಪರ್ಧೆ ಎಂದು ಬಿಂಬಿಸುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಹೇಳಿದ್ದಾರೆ.
ಇಂದು ಬೆಂಗಳೂರಿಗೆ ಆಗಮಿಸಿದ ಮೀರಾ ಕುಮಾರ್ ಕಾಂಗ್ರೆಸ್ ಶಾಸಕರು ಹಾಗೂ ಜೆಡಿಎಸ್ ವರಿಷ್ಠ ದೇವೆಗೌಡರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ.
ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ, ಬಿಜೆಪಿ ಅಭ್ಯರ್ಥಿ ರಾಮನಾಥ್ ಕೋವಿಂದ ಗೆಲ್ಲುವುದು ಬಹುತೇಕ ಖಚಿತವಾಗಿರುವಾಗ ನೀವ್ಯಾಕೆ ಸ್ಪರ್ಧಿಸುತ್ತಿದ್ದೀರಿ ಎನ್ನುವ ಪತ್ರಕರ್ತರು ಪ್ರಶ್ನಿಸಿದ್ದಾರೆ. ನಾನು ಹೋದಲ್ಲೆಲ್ಲಾ ಈ ಪ್ರಶ್ನೆಯನ್ನು ನನಗೆ ಕೇಳಿದ್ದಾರೆ. ನನಗೆ ಸಂಖ್ಯಾಬಲವಿಲ್ಲವೆಂದು ನಾನು ನಾಮಪತ್ರವನ್ನು ಹಿಂತೆಗೆದುಕೊಳ್ಳಲೇ? ಗೆಲುವು ಯಾರದ್ದು ಎಂದು ಮೊದಲೇ ನಿರ್ಧರಿಸಿದ್ದರೆ ಚುನಾವಣೆ ಯಾಕೆ ಮಾಡಬೇಕು ಎಂದು ಮೀರಾ ಕುಮಾರ್ ತಿರುಗಿ ಸವಾಲೆಸೆದಿದ್ದಾರೆ.
ನಾನು ಮತ್ತು ಕೋವಿಂದರವರು ನಾಮನಿರ್ದೇಶನವಾದಾಗ ಜಾತಿ ವಿಚಾರ ಬಂತು. ರಾಷ್ಟ್ರಪತಿ ಚುನಾವಣೆ ದಲಿತ v/s ದಲಿತ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿರುವುದು ನಾಚಿಕೆಗೇಡಿನ ವಿಚಾರ. 17 ಪಕ್ಷಗಳು ನನ್ನನ್ನು ಅವಿರೋಧವಾಗಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿವೆ. ಸೈದ್ಧಾಂತಿಕ ನಿಲುವಿನ ಮೇಲೆ ಒಗ್ಗಟ್ಟು ಆಧಾರವಾಗಿದೆ ಎಂದು ಮೀರಾ ಕುಮಾರ್ ಹೇಳಿದ್ದಾರೆ.
