ಟೂರಿಸ್ಟ್ ಸ್ಪಾಟ್'ಗಳಲ್ಲಿ ಸೆಲ್ಫಿ ತೆಗೆಯೋ ಮುನ್ನ ಎಚ್ಚರ, ಸೆಲ್ಫಿ ನಿಯಂತ್ರಣಕ್ಕೆ ಪ್ರವಾಸೋದ್ಯಮ ಇಲಾಖೆ ಮಾರ್ಗಸೂಚಿ ರೂಪಿಸಿದೆ. ನಿರ್ಬಂಧಿತ ಪ್ರದೇಶ ಹಾಗೂ ಅತೀ ಅಪಾಯದ ಸ್ಥಳಗಳಲ್ಲಿ ಸೆಲ್ಫಿ ತೆಗೆಯದಂತೆ ಸೂಚನೆ ನೀಡಿದ್ದು,ಇದನ್ನು ಶಿಕ್ಷಾರ್ಹ ಅಪರಾಧವವೆಂಬ ಆದೇಶ ಜಾರಿ ಮಾಡಲು ಚಿಂತನೆ ನಡೆಸಿದೆ.
ಬೆಂಗಳೂರು(ಅ.19): ಟೂರಿಸ್ಟ್ ಸ್ಪಾಟ್'ಗಳಲ್ಲಿ ಸೆಲ್ಫಿ ತೆಗೆಯೋ ಮುನ್ನ ಎಚ್ಚರ, ಸೆಲ್ಫಿ ನಿಯಂತ್ರಣಕ್ಕೆ ಪ್ರವಾಸೋದ್ಯಮ ಇಲಾಖೆ ಮಾರ್ಗಸೂಚಿ ರೂಪಿಸಿದೆ. ನಿರ್ಬಂಧಿತ ಪ್ರದೇಶ ಹಾಗೂ ಅತೀ ಅಪಾಯದ ಸ್ಥಳಗಳಲ್ಲಿ ಸೆಲ್ಫಿ ತೆಗೆಯದಂತೆ ಸೂಚನೆ ನೀಡಿದ್ದು,ಇದನ್ನು ಶಿಕ್ಷಾರ್ಹ ಅಪರಾಧವವೆಂಬ ಆದೇಶ ಜಾರಿ ಮಾಡಲು ಚಿಂತನೆ ನಡೆಸಿದೆ.
ಇದರ ಅನ್ವಯ ಅತಿ ಅಪಘಾತ ವಲಯ ಹಾಗೂ ನಿರ್ಬಂಧಿತ ಪ್ರದೇಶಗಳಲ್ಲಿ ಇನ್ನು ಮುಂದೆ ಸೆಲ್ಫಿ ತೆಗೆಯುವುದು ಶಿಕ್ಷಾರ್ಹ ಅಪರಾಧ. ರಾಜ್ಯದಲ್ಲಿ ಹೆಚ್ಚುತ್ತಿರುವ ಸೆಲ್ಫಿ ಹುಚ್ಚಾಟಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಪ್ರವಾಸೋದ್ಯಮ ಇಲಾಖೆ, ಕೆಲವು ಕಡೆ ಅಂದರೆ ಅತೀ ಅಪಾಯದ ಸ್ಥಳಗಳಲ್ಲಿ ಸೆಲ್ಫಿ ತೆಗೆಯದಂತೆ ನಿರ್ಬಂಧ ವಿಧಿಸಿದೆ. ಮೊನ್ನೆಯಷ್ಟೆ ಕನಕಪುರ ಸಮೀಪ ನಗರದ ಕಾಲೇಜ್'ವೊಂದರ ವಿದ್ಯಾರ್ಥಿಯೊಬ್ಬ ಸೆಲ್ಫಿ ಹುಚ್ಚಿಗಾಗಿ ನೀರಿಗೆ ಬಿದ್ದು ಪ್ರಾಣವನ್ನೇ ಕಳೆದುಕೊಂಡಿದ್ದ. ರಾಜ್ಯದಲ್ಲಿ ಸೆಲ್ಫಿ ಹುಚ್ಚಾಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.
ದೇಶದಲ್ಲೇ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇತ್ತೀಚೆಗೆ ಅತ್ಯಾಧುನಿಕ ಮೊಬೈಲ್‍ಗ'ಳು ಬಂದಿರುವ ಪರಿಣಾಮ ಸೆಲ್ಫಿ ತೆಗೆದುಕೊಳ್ಳುವುದು ಹೆಚ್ಚಾಗಿದೆ. ಇನ್ನು ಮುಂದೆ ಅಪಾಯದ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳದಂತೆ ಕಡಿವಾಣ ಹಾಕಲು ಅಲ್ಲಿನ ಅಧಿಕಾರಿಗಳಿಗೆ ಪ್ರವಾಸೋದ್ಯಮ ಇಲಾಖೆ ಸೂಚನೆ ಕೊಟ್ಟಿದೆ.
ಈ ಸೂಚನೆ ಪ್ರಕಾರ, ಅತೀ ಅಪಾಯದ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಅನುಮತಿ ಪಡೆಯದೆ ಸೆಲ್ಫಿ ತೆಗೆಯುವಂತಿಲ್ಲ. ಪ್ರಾಣಿ-ಪಕ್ಷಿಗಳು, ನದಿ, ಜಲಪಾತ, ಸಮುದ್ರ ಸೇರಿದಂತೆ ಎಲ್ಲೇ ಸೆಲ್ಫಿ ತೆಗೆಯಬೇಕಾದರೆ ಅನುಮತಿ ಕಡ್ಡಾಯ. ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದ ನಾನಾ ಕಡೆ ಸೆಲ್ಫಿಗಾಗಿ ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಇತ್ತೀಚೆಗೆ ಕನಕಪುರ ಸಮೀಪ ವಿದ್ಯಾರ್ಥಿ ಸಾವನ್ನಪ್ಪಿದ್ದ. ಕೆಲ ತಿಂಗಳ ಹಿಂದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಬಳಿ ವ್ಯಕ್ತಿಯೋರ್ವ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ. ಮಂಡ್ಯ ಸಮೀಪದ ಹುಲಿವಾಣ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಹರಿಯುವ ನೀರಿಗೆ ಬಿದ್ದು ಬೆಂಗಳೂರಿನ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಕೊನೆಯುಸಿರೆಳೆದಿದ್ದರು.
ಚಾರ್ಮುಡಿಘಾಟ್‍ನ' ಕಂದಕದಲ್ಲೂ ಇಬ್ಬರು ಮೃತಪಟ್ಟಿದ್ದರು. ಮೊನ್ನೆಯಷ್ಟೇ ದೊಡ್ಡಬಳ್ಳಾಪುರ ಸಮೀಪ ಬಂಡೆ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿಯೊಬ್ಬ ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಬಹುತೇಕ ಕಡೆ ಇಂತಹ ಅವಘಡಗಳು ಪದೇ ಪದೇ ಸಂಭವಿಸುತ್ತಲೇ ಇರುವುದರಿಂದ ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
