ಕೊಲ್ಹಾಪುರದಲ್ಲಿ ಮಂಗಳವಾರದಂದು ದಿಢೀರ್‌ ಆಗಿ ರಸ್ತೆಗಿಳಿದ ಶಿವಸೇನೆ ಕಾರ್ಯಕರ್ತರು ಕೊಲ್ಹಾಪುರ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲಿ ನಿಲುಗಡೆಯಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ ಒಂದರಿಂದ ನಿರ್ವಾಹಕ, ಚಾಲಕರಿಬ್ಬರನ್ನೂ ಕೆಳಗಿಳಿಸಿ ಇಬ್ಬರಿಂದಲೂ ‘ಜೈ ಮಹಾರಾಷ್ಟ್ರ', ‘ಛತ್ರಪತಿ ಶಿವಾಜಿ ಮಹಾರಾಜ್‌ ಕೀ ಜೈ' ಎಂಬ ಘೋಷಣೆ ಕೂಗಿಸಿದ್ದಾರೆ.

ಬೆಳಗಾವಿ: ‘ನಾಡದ್ರೋಹ ಎಸಗುವ ಎಂಇಎಸ್‌ ಪಾಲಿಕೆ ಸದಸ್ಯರ ಸದಸ್ಯತ್ವ ರದ್ದುಗೊಳಿಸಲು ಕಾಯ್ದೆ ತರಲಾಗುವುದು' ಎಂದಿರುವ ಸಚಿವ ರೋಶನ್‌ ಬೇಗ್‌ ಅವರ ಹೇಳಿಕೆಯನ್ನೇ ನೆಪವಾಗಿಟ್ಟುಕೊಂಡ ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಿಬ್ಬಂದಿಗೆ ಕಿರುಕುಳ ನೀಡಿ ಪುಂಡಾಟಿಕೆ ಮೆರೆದಿದ್ದಾರೆ.

ಕೊಲ್ಹಾಪುರದಲ್ಲಿ ಮಂಗಳವಾರದಂದು ದಿಢೀರ್‌ ಆಗಿ ರಸ್ತೆಗಿಳಿದ ಶಿವಸೇನೆ ಕಾರ್ಯಕರ್ತರು ಕೊಲ್ಹಾಪುರ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲಿ ನಿಲುಗಡೆಯಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ ಒಂದರಿಂದ ನಿರ್ವಾಹಕ, ಚಾಲಕರಿಬ್ಬರನ್ನೂ ಕೆಳಗಿಳಿಸಿ ಇಬ್ಬರಿಂದಲೂ ‘ಜೈ ಮಹಾರಾಷ್ಟ್ರ', ‘ಛತ್ರಪತಿ ಶಿವಾಜಿ ಮಹಾರಾಜ್‌ ಕೀ ಜೈ' ಎಂಬ ಘೋಷಣೆ ಕೂಗಿಸಿದ್ದಾರೆ. ಕರ್ನಾಟಕ ಸರ್ಕಾರ ಹಾಗೂ ಸಚಿವ ರೋಷನ್‌ ಬೇಗ್‌ ವಿರುದ್ಧ ಘೋಷಣೆ ಕೂಗಿದ ಶಿವಸೇನೆ ಕಾರ್ಯಕರ್ತರು ಬಸ್‌ನ ಮುಂದಿನ ಗಾಜಿನ ಮೇಲೆ ಆಯಿಲ್‌ ಪೇಂಟ್‌ನಿಂದ ‘ಜೈ ಮಹಾರಾಷ್ಟ್ರ' ಎಂಬ ಬರೆಹ ಬರೆದರು. ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಾರವಾರ, ಭಾಲ್ಕಿ ಸೇರಿದಂತೆ ಮತ್ತಿತರ ಗಡಿಭಾಗದಲ್ಲಿರುವ ಮರಾಠಿ ಬಹುಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಶಿವಸೇನೆ ಪುಂಡರು ಆಗ್ರಹಿಸಿದರು. ಕೊಲ್ಹಾಪುರದ ಶಿವಸೇನೆ ಮುಖಂಡ ಸಂಜಯ ಮಾರುತಿ ಪವಾರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಕರ್ನಾಟಕ ಸರ್ಕಾರಕ್ಕೆ ಸವಾಲು: ಬೆಳಗಾವಿಯಲ್ಲಿ ಮಾಜಿ ಮೇಯರ್‌ ಸರಿತಾ ಪಾಟೀಲ್‌ ಹಾಗೂ ಜಿಪಂ ಸದಸ್ಯೆ ಸರಸ್ವತಿ ಪಾಟೀಲ್‌ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮಾತನಾಡಿರುವ ಅವರು, ‘ನಮಗೆ ನ್ಯಾಯ ದೊರೆಯುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ನಾವು ಜೈ ಮಹಾರಾಷ್ಟ್ರ ಘೋಷಣೆಯನ್ನು ಕೂಗುತ್ತೇವೆ. ಕರ್ನಾಟಕಕ್ಕೆ ತಾಕತ್ತಿದ್ದರೆ ನಮ್ಮ ಸದಸ್ಯತ್ವ ರದ್ದುಗೊಳಿಸಬೇಕು. ನಮ್ಮ ನೆತ್ತರೂ ಹರಿದರೂ ಗಡಿ ಹೋರಾಟ ಕೈ ಬಿಡುವುದಿಲ್ಲ ಎಂದು ಜೈಕಾರ ಕೂಗಿದ್ದಾರೆ.