"ಕಾವೇರಿ ನೀರಿಗಾಗಿ ಇಡೀ ಚಿತ್ರರಂಗವೇ ಒಂದಾಗಿದೆ. ಆ ಸ್ಟಾರ್ ಬಂದಿಲ್ಲ ಈ ಸ್ಟಾರ್ ಬಂದಿಲ್ಲ ಎಂದು ದೂರುವುದು ಸರಿಯಲ್ಲ. ಶೂಟಿಂಗ್ ಅಥವಾ ಇನ್ಯಾವುದೋ ಕಾರಣಕ್ಕೆ ಅವರು ಇಲ್ಲಿ ಬರಲಾಗಿಲ್ಲ. ನಾವಿಲ್ಲಿ ಬಂದಿದ್ದೇವೆ ಎಂದರೆ ಯಶ್, ಸುದೀಪ್ ಅವರೂ ಬಂದಂತೆಯೇ. ಚಿತ್ರರಂಗದ ನಾವೆಲ್ಲರೂ ಒಂದೆಯೇ,"

ಬೆಂಗಳೂರು(ಸೆ. 09): "ನೀವೆಲ್ಲರೂ ಇಲ್ಲಿ ಬಂದಿರುವುದು ಜೈಕಾರ ಹಾಕುವುದಕ್ಕಲ್ಲ. ಕಾವೇರಿ ನೀರಿಗಾಗಿ ಹೋರಾಡಲು.." - ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಸ್ಯಾಂಡಲ್ವುಡ್ ಗಣ್ಯರು ಕಾವೇರಿ ನೀರಿಗಾಗಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್'ಕುಮಾರ್ ಖಾರವಾಗಿ ಹೇಳಿದ ಮಾತಿದು. ಸಭೆಯಲ್ಲಿ ದರ್ಶನ್ ಆಗಮಿಸುತ್ತಿದ್ದಂತೆಯೇ ಅವರ ಅಭಿಮಾನಿಗಳು ಜೋರಾಗಿ ಜೈಕಾರ ಹಾಕಿದರು. ಇದಕ್ಕೆ ವ್ಯಗ್ರಗೊಂಡ ಶಿವರಾಜ್'ಕುಮಾರ್, ಜೈಕಾರ ಕೂಗಲು ಬೇರೆ ಸಭೆಯನ್ನು ಇಟ್ಟುಕೊಳ್ಳೋಣ. ನಾವಿಲ್ಲಿ ಕಾವೇರಿ ನೀರಿಗಾಗಿ ಹೋರಾಟ ಮಾಡಲು ಬಂದಿದ್ದೇವೆ ಎಂಬುದನ್ನು ಮರೆಯಬೇಡಿ ಎಂದು ಜನರಿಗೆ ತಿಳಿಹೇಳಿದರು.

ಯಶ್, ಸುದೀಪ್ ಪರ ಶಿವಣ್ಣ ಬ್ಯಾಟಿಂಗ್:
"ಕಾವೇರಿ ನೀರಿಗಾಗಿ ಇಡೀ ಚಿತ್ರರಂಗವೇ ಒಂದಾಗಿದೆ. ಆ ಸ್ಟಾರ್ ಬಂದಿಲ್ಲ ಈ ಸ್ಟಾರ್ ಬಂದಿಲ್ಲ ಎಂದು ದೂರುವುದು ಸರಿಯಲ್ಲ. ಶೂಟಿಂಗ್ ಅಥವಾ ಇನ್ಯಾವುದೋ ಕಾರಣಕ್ಕೆ ಅವರು ಇಲ್ಲಿ ಬರಲಾಗಿಲ್ಲ. ನಾವಿಲ್ಲಿ ಬಂದಿದ್ದೇವೆ ಎಂದರೆ ಯಶ್, ಸುದೀಪ್ ಅವರೂ ಬಂದಂತೆಯೇ. ಚಿತ್ರರಂಗದ ನಾವೆಲ್ಲರೂ ಒಂದೆಯೇ," ಎಂದು ಹ್ಯಾಟ್ರಿಕ್ ಹೀರೋ ತಿಳಿಸಿದರು.

ಎಲ್ಲಾ ಭಾಷಿಕರೂ ಹೊರಗೆ ಬರಲಿ:
ಬೆಂಗಳೂರಿನಲ್ಲಿರುವ ಎಲ್ಲಾ ಭಾಷಿಕರೂ ಕಾವೇರಿ ನೀರಿಗಾಗಿ ಹೋರಾಟಕ್ಕಿಳಿಯಬೇಕು. ಇಲ್ಲಿರುವ ಕನ್ನಡಿಗರು, ತೆಲುಗರು, ತಮಿಳಿಗರೂ ಕಾವೇರಿ ನೀರನ್ನು ಕುಡಿಯುವುದರಿಂದ ಅವರು ಬೀದಿಗೆ ಬಂದು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಇದೇ ವೇಳೆ ಶಿವಣ್ಣ ಕರೆ ನೀಡಿದರು.

ಕಾವೇರಿ ಇಡೀ ಕರ್ನಾಟಕಕ್ಕೆ ಸೇರಿದ್ದು:
ಕಾವೇರಿ ನದಿಯು ಮಂಡ್ಯ, ಮಡಿಕೇರಿ, ಬೆಂಗಳೂರಿಗೆ ಸೇರಿದ್ದಲ್ಲ, ಇಡೀ ಕರ್ನಾಟಕಕ್ಕೆ ಸೇರಿದ್ದು ಎಂಬುದು ನೆನಪಿರಲಿ. ರಾಜ್ಯದ ಪ್ರತಿಯೊಬ್ಬನೂ ಕಾವೇರಿಗಾಗಿ ಹೋರಾಟ ನಡೆಸಬೇಕು ಎಂದೂ ಶಿವಣ್ಣ ಕೇಳಿಕೊಂಡರು.

ಬಂಗಾರಪ್ಪನವರ ಕೆಚ್ಚು ಈಗಿನವರಿಗೆ ಇಲ್ಲ:
1992ರಲ್ಲಿ ಇದೇ ವಿಚಾರದಲ್ಲಿ ಆಗಿನ ಮುಖ್ಯಮಂತ್ರಿ ಬಂಗಾರಪ್ಪನವರು ಸುಪ್ರೀಂಕೋರ್ಟ್ ಆಜ್ಞೆಯನ್ನು ಮೀರಿ ಸುಗ್ರೀವಾಜ್ಞೆ ಜಾರಿಗೆ ತಂದ ದಿಟ್ಟ ಕ್ರಮವನ್ನು ನೆನಪಿಸಿಕೊಂಡ ಶಿವರಾಜ್'ಕುಮಾರ್, ಅಂಥ ಧೈರ್ಯ ಈಗಿನ ನಾಯಕರಿಗೆ ಇಲ್ಲ ಎಂದು ಮರುಗಿದರು. ಬಂಗಾರಪ್ಪನವರಂತೆ ಈಗಿನವರು ಗಟ್ಟಿ ನಿರ್ಧಾರ ಕೈಗೊಂಡಿದ್ದರೆ ಗಂಡಸಾಗಿರುತ್ತಿದ್ದರು ಎಂದು ಪ್ರಸಕ್ತ ಸರಕಾರವನ್ನು ಟೀಕಿಸಿದರು. ಕಾವೇರಿ ವಿಚಾರದಲ್ಲಿ ಧೈರ್ಯದಿಂದ ನಡೆದುಕೊಳ್ಳುವ ಸರಕಾರ ನಮಗೆ ಬೇಕಿದೆ. ಇನ್ಮುಂದೆ ವೋಟ್ ಮಾಡುವಾಗ ಸರಿಯಾಗಿ ಯೋಚಿಸಿ ಮತದಾನ ಮಾಡಿ ಎಂದು ರಾಜ್ಯದ ಜನತೆ ಕರೆ ನೀಡಿದರು.

ಶಿವರಾಜ್'ಕುಮಾರ್ ಅವರಲ್ಲದೇ, ದರ್ಶನ್, ಹಂಸಲೇಖಾ, ಅನಿರುದ್ಧ್, ಸಾರಾ ಗೋವಿಂದು, ಶ್ರುತಿ, ಭಾರತಿ ಮೊದಲಾದ ಸಿನಿಮಾ ಗಣ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.