ಬೀಟ್ ವ್ಯವಸ್ಥೆ ನಿರ್ವಹಣೆಯನ್ನು ಡಿಜಿಟಲ್ ಮಾಧ್ಯಮಕ್ಕೆ ಅಳವಡಿಸಿರುವ ಜಿಲ್ಲಾ ಪೊಲೀಸ್ ‘ಸುಭಾಹು’ ಎಂಬ ವಿನೂತನ ಸಾಫ್ಟ್‌'ವೇರ್ ಅಭಿವೃದ್ಧಿಪಡಿಸಿದೆ. ಈ ಮೂಲಕ ಗಸ್ತಿನಲ್ಲಿರುವ ಸಿಬ್ಬಂದಿ ಯಾವ ಸಮಯದಲ್ಲಿ, ಯಾವ ಸ್ಥಳದಲ್ಲಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ.

ಶಿವಮೊಗ್ಗ(ನ.17) : ಬೀಟ್ ವ್ಯವಸ್ಥೆ ನಿರ್ವಹಣೆಯನ್ನು ಡಿಜಿಟಲ್ ಮಾಧ್ಯಮಕ್ಕೆ ಅಳವಡಿಸಿರುವ ಜಿಲ್ಲಾ ಪೊಲೀಸ್ ‘ಸುಭಾಹು’ ಎಂಬ ವಿನೂತನ ಸಾಫ್ಟ್‌'ವೇರ್ ಅಭಿವೃದ್ಧಿಪಡಿಸಿದೆ. ಈ ಮೂಲಕ ಗಸ್ತಿನಲ್ಲಿರುವ ಸಿಬ್ಬಂದಿ ಯಾವ ಸಮಯದಲ್ಲಿ, ಯಾವ ಸ್ಥಳದಲ್ಲಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ.ಪೂರ್ವ ವಲಯ ಇನ್‌'ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸಲೀಂ ಅವರು ಗುರುವಾರ 'ಸುಭಾಹು ಸಾಫ್ಟ್‌'ವೇರ್‌'ಗೆ ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಲಪಡಿಸುವ ಉದ್ದೇಶದಿಂದ ತಂತ್ರಜ್ಞಾನ ಆಧಾರಿತ ಇ-ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ‘ಸುಭಾಹು’ ಎಂಬ ವಿನೂತನ ಮೊಬೈಲ್ ಅಪ್ಲಿಕೇಶನ್ ಸಾಫ್ಟ್‌'ವೇರನ್ನುಅಳವಡಿಸಿದೆ.

ಬೀಟ್‌'ನ ಸ್ಥಳಗಳಲ್ಲಿ ಅಳವಡಿಸಿರುವಂತಹ ಸುಭಾಹು ಟ್ಯಾಗ್‌'ಗಳನ್ನು ಗಸ್ತಿನಲ್ಲಿರುವ ಪೊಲೀಸ್ ಸಿಬ್ಬಂದಿ ಮೊಬೈಲ್ ಫೋನ್ ಬಳಸಿ ಸ್ಕ್ಯಾನ್ ಮಾಡಿದಾಗ ಅವರು ಇರುವಂತಹ ಸ್ಥಳ ಮತ್ತು ಸಮಯವು ಅವರ ಮೇಲಧಿಕಾರಿಗಳಿಗೆ ಅವರಲ್ಲಿರುವ ಸ್ಮಾರ್ಟ್ ಫೋನ್‌'ನಿಂದಲೇ ತಿಳಿಯಬಹುದು. ಗಸ್ತಿನಲ್ಲಿ ಇರುವ ಸಿಬ್ಬಂದಿ ಯಾವ ಸಮಯದಲ್ಲಿ ಯಾವ ಸ್ಥಳದಲ್ಲಿದ್ದಾರೆ ಎಂಬ ಮಾಹಿತಿ

ಮೇಲಧಿಕಾರಿಗಳು ತಿಳಿಯಬಹುದು ಎಂದರು. ಒಂದು ವೇಳೆ ಗಸ್ತಿನಲ್ಲಿ ಇರುವ ಸಿಬ್ಬಂದಿ ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದ ವಾಹನದಲ್ಲಿ ಸುಭಾಹು ವೆಬ್ ಸೈಟ್‌'ನಿಂದ ಗೂಗಲ್ ಮ್ಯಾಪ್‌'ನಲ್ಲಿ ಗುರುತುಪಡಿಸಿರುವಂತಹ ಸ್ಥಳವನ್ನು ಹಾದುಹೋದಾಗ ಮೇಲಧಿಕಾರಿಗಳಿಗೆ ಗಸ್ತು ಮಾಡಿದ ವಿಷಯ ತಲುಪುತ್ತದೆ ಎಂದವರು ನುಡಿದರು.

ಗಸ್ತಿನಲ್ಲಿರುವ ಸಿಬ್ಬಂದಿ ಆಪತ್ಕಾಲದಲ್ಲಿ ತಮ್ಮ ಸಹದ್ಯೋಗಿ ಅಥವಾ ಮೇಲಧಿಕಾರಿಗಳಿಗೆ ಎಸ್.ಒ.ಎಸ್. ಎಂಬ ಆಪ್ಶನ್'ನಿಂದ ಸಂದೇಶದ ಮತ್ತು ಫೋಟೋವನ್ನು ಸುಲಭವಾಗಿ ರವಾನಿಸಬಹುದಾಗಿದೆ. ಮೇಲಧಿಕಾರಿಗಳು ಒಂದೇ ಸಮಯದಲ್ಲಿ 50 ಗಸ್ತು ಸಿಬ್ಬಂದಿ ಮಾಹಿತಿಯನ್ನು ಅವರ ಸ್ಮಾರ್ಟ್‌'ಫೋನ್‌'ನಲ್ಲಿಯೇ ತಿಳಿಯಬಹುದು. ಅಲ್ಲದೇ, ಸುಭಾಹು ತಂತ್ರಾಂಶವನ್ನು ಗೂಗಲ್ ಪ್ಲೇ ಸ್ಟೋರ್‌'ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಯಾವುದೇ ಆಂಡ್ರ್ಯಾಯ್ಡ್ ಮೊಬೈಲ್‌'ನಲ್ಲಿ ಅಳವಡಿಸಿಕೊಳ್ಳಬಹುದು ಎಂದರು.

ಪೊಲೀಸ್ ಸ್ಟೇಷನ್ ಮಿತ್ರ: ಸಾರ್ವಜನಿಕರು ಆನ್‌ಲೈನ್ ಮುಖಾಂತರ ದೂರನ್ನು ಸಲ್ಲಿಸಲು ಅನುಕೂಲ ಆಗುವಂತೆ ಪೊಲೀಸ್ ಇಲಾಖೆಯು ಪೊಲೀಸ್ ಸ್ಟೇಷನ್ ಮಿತ್ರ ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಿದೆ ಎಂದವರು ನುಡಿದರು. ಈ ತಂತ್ರಾಂಶವು ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳೊಂದಿಗೆ ಸಂಪರ್ಕ ಸಾಧಿಸಲಿದೆ. ಸಾರ್ವಜನಿಕರು ಈ ತಂತ್ರಾಂಶದ ಮುಖಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನೇರವಾಗಿ ದೂರನ್ನು ಸಲ್ಲಿಸಬಹುದು. ತಂತ್ರಾಂಶವನ್ನು ಆಂಡ್ರಾಯಿಡ್ ಮೊಬೈಲ್‌'ಗಳಿಗೆ ಅಳವಡಿಸಿಕೊಂಡು ಮೊಬೈಲ್ ಮೂಲಕ ತಮ್ಮ ದೂರುಗಳನ್ನು ನೀಡಬಹುದು.

ಅಲ್ಲದೆ, ದೂರುದಾರರು ತಮ್ಮ ದೂರಿನ ಸ್ಥಿತಿಗತಿಗಳನ್ನು ಮೊಬೈಲ್ ಮೂಲಕ ತಿಳಿಯಬಹುದು ಎಂದರು. ಪೊಲೀಸ್ ಅಧೀಕ್ಷಕರು ನೇರವಾಗಿ ಸಾರ್ವಜನಿಕರ ದೂರುಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ಸೂಚನೆ ನೀಡುವರು. ಈ ತಂತ್ರಾಂಶ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ಜನಸ್ನೇಹಿ ಆಗಿರುವ ಈ ತಂತ್ರಾಂಶವು ಸಾರ್ವಜನಿಕರಿಗೆ ಉಪಯುಕ್ತವಾಗಿದ್ದು, ದಿನದ 24 ಗಂಟೆಯೂ ದೂರನ್ನು ದಾಖಲಿಸಬಹುದು ಎಂದು ನುಡಿದರು.

ನಗರದ ಎಲ್ಲ ವರ್ತುಲಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ಮನೆಗೆ ದಂಡ ಕಟ್ಟಲು ನೋಟೀಸ್ ನೀಡುವ ವ್ಯವಸ್ಥೆ ಜಾರಿಗೆ ತರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಯ ವಿವಿಧ ಶ್ರೇಣಿಯ ಪೊಲೀಸ್ ಸಿಬ್ಬಂದಿಗೆ ಆಧುನಿಕ ತಂತ್ರಜ್ಞಾನ ಅವಳಡಿಸಿದ ಟ್ಯಾಬ್ಲೆಟ್, ಸ್ಮಾಟ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಸೇರಿದಂತೆ ಜಿಲ್ಲೆಯ ಎಲ್ಲಾ ಠಾಣೆಗಳ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.