ಕರ್ನಾಟಕದ ಶಿವಮೊಗ್ಗ ಜಿಲ್ಲೆ ಹೊಸನಗರ ಮೂಲದ ಐಐಟಿ-ಗುವಾಹಟಿ ವಿದ್ಯಾರ್ಥಿನಿಯೊಬ್ಬಳು ಬುಧವಾರ ಮುಂಜಾನೆ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗುವಾಹಟಿ/ಹೊಸನಗರ : ‘ಶಿಕ್ಷಕಿ ಆಗಬೇಕು ಎಂದುಕೊಂಡಿದ್ದೆ. ಎಂಜಿನಿಯರಿಂಗ್ ಬೇಡವಾಗಿತ್ತು’ ಎಂದು ಆತ್ಮಹತ್ಯಾ ಪತ್ರ ಬರೆದಿಟ್ಟ ಕರ್ನಾಟಕದ ಶಿವಮೊಗ್ಗ ಜಿಲ್ಲೆ ಹೊಸನಗರ ಮೂಲದ ಐಐಟಿ-ಗುವಾಹಟಿ ವಿದ್ಯಾರ್ಥಿನಿಯೊಬ್ಬಳು ಬುಧವಾರ ಮುಂಜಾನೆ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
18 ವರ್ಷ ವಯಸ್ಸಿನ ಬಿ-ಟೆಕ್ (ಮೆಕ್ಯಾನಿಕಲ್) ಮೊದಲ ವರ್ಷದ ವಿದ್ಯಾರ್ಥಿನಿ ಎಸ್.ಸಿ. ನಾಗಶ್ರೀ ಆತ್ಮಹತ್ಯೆ ಮಾಡಿಕೊಂಡವಳು. ಅರೆಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಸುರೇಘಟ್ಟದ ಚಂದ್ರಶೇಖರ ಐತಾಳರ ಇಬ್ಬರು ಪುತ್ರಿಯರಲ್ಲಿ ಮೊದಲನೆಯವಳು ನಾಗಶ್ರೀ.
‘ನನ್ನ ವೃತ್ತಿ ಆಯ್ಕೆ ಶಿಕ್ಷಕಿ ಆಗಬೇಕು ಎಂದಾಗಿತ್ತು. ಆದರೆ ಎಂಜಿನಿಯರಿಂಗ್ ನನಗೆ ಸಾಕಾಗಿದೆ. ಪೋಷಕರ ಹಾಗೂ ಕುಟುಂಬದವರ ನಿರೀಕ್ಷೆಗೆ ತಕ್ಕಂತೆ ಬದುಕಲು ಆಗುತ್ತಿಲ್ಲ. ಹೀಗಾಗಿ ಸಾಯುವುದೇ ಮೇಲು’ ಎಂದು ಆತ್ಮಹತ್ಯಾ ಪತ್ರದಲ್ಲಿ ನಾಗಶ್ರೀ ಬರೆದಿಟ್ಟಿದ್ದಾಳೆ ಎಂದು ಗುವಾಹಟಿಯ ಅಮೀನ್‌ಗಾಂವ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಣಾ ಭುಯಾನ್ ಹೇಳಿದ್ದಾರೆ.
ನಾಗಶ್ರೀ ಎಂಜಿನಿಯರಿಂಗ್ ಸೇರಿಕೊಂಡು ಕೇವಲ ಒಂದೂವರೆ ತಿಂಗಳಾಗಿತ್ತು. ಆಕೆ ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ಕೋರ್ಸ್ ಬಗ್ಗೆ ಕೌನ್ಸೆಲಿಂಗ್ ಮಾಡಲಾಗಿತ್ತು. ಯಾವತ್ತೂ ಖಿನ್ನತೆ ತೋರಿಸಿರಲಿಲ್ಲ ಎಂದು ಕಾಲೇಜಿನ ಸಿಬ್ಬಂದಿ ಹೇಳಿದ್ದಾರೆ.
ಬುಧವಾರ ಬೆಳಗ್ಗೆ ತನಗೆ ಹುಷಾರಿಲ್ಲ ಎಂದು ಹಾಸ್ಟೆಲ್‌ನ ರೂಮ್‌ಮೇಟ್‌ಗೆ ನಾಗಶ್ರೀ ಹೇಳಿದ್ದಳು. ಹೀಗಾಗಿ ಕ್ಲಾಸ್‌ಗೆ ಹೋಗಿರಲಿಲ್ಲ. ರೂಮ್‌ಮೇಟ್ ಮಾತ್ರ ಕ್ಲಾಸಿಗೆ ತೆರಳಿ ಬೆಳಗ್ಗೆ 10.30ಕ್ಕೆ ಹಾಸ್ಟೆಲ್‌ಗೆ ಆಗಮಿಸಿದಳು. ಆಗ ನಾಗಶ್ರೀ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಳು. ಬಾಗಿಲು ತೆರೆಯಲಿಲ್ಲ. ಹೀಗಾಗಿ ಭದ್ರತಾ ಸಿಬ್ಬಂದಿಗೆ ರೂಮ್‌ಮೇಟ್ ಈ ಬಗ್ಗೆ ಮಾಹಿತಿ ನೀಡಿದಳು. ಭದ್ರತಾ ಸಿಬ್ಬಂದಿಯು ಪೊಲೀಸರನ್ನು ಕರೆಸಿ ಬಾಗಿಲು ಒಡೆಸಿದಾಗ ನಾಗಶ್ರೀ ದೇಹವು ಸೀಲಿಂಗ್ ಫ್ಯಾನ್‌ಗೆ ನೇತಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
‘ಮರಣ ಪತ್ರವನ್ನು ವಶಕ್ಕೆ ಪಡೆದು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದೇವೆ. ನಾಗಶ್ರೀಯ ಪೋಷಕರಿಗೆ ಘಟನೆಯ ಮಾಹಿತಿ ನೀಡಿ ಅವರಿಗೆ ಬರಹೇಳಿದ್ದೇವೆ’ ಎಂದು ಪೊಲೀಸರು ತಿಳಿಸಿ ದ್ದಾರೆ. ನಾಗಶ್ರೀ ಪ್ರಾಥಮಿಕ ಶಿಕ್ಷಣ ಹೊಸನಗರದಲ್ಲಿ ಮಾಡಿದ್ದು. ಬೆಂಗಳೂರಿನಲ್ಲಿ ಪಿಯುಸಿ, ಜೆಇಇ ತರಬೇತಿ ಪಡೆದಿದ್ದಳು.
