ನವದೆಹಲಿ (ಮೇ.12): ಇದುವರೆಗೂ ಪೂರ್ಣಾವಧಿ ರಕ್ಷಣಾ ಸಚಿವರನ್ನು ನೇಮಕ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಕಿಡಿಕಾರಿದೆ.

ದೇಶದ ರಕ್ಷಣಾ ವಿಚಾರದಲ್ಲಿ ಕೇಂದ್ರ ಸರ್ಕಾರ ಆಟ ಆಡುತ್ತಿದೆ. ಕಳೆದ ಮೂರು ತಿಂಗಳಿಂದ ರಕ್ಷಣಾ ಸಚಿವರನ್ನು ಬದಲಾಯಿಸಿಲ್ಲ.  ಇನ್ನೂ ಪೂರ್ಣಾವಧಿ ರಕ್ಷಣಾ ಸಚಿವರ ನೇಮಕವಾಗಿಲ್ಲ. ಕೇಂದ್ರ ಸರ್ಕಾರ ದೇಶದ ರಕ್ಷಣಾ ವಿಚಾರದಲ್ಲಿ ಆಟವಾಡುತ್ತಿದೆಯೆಂದು ಶಿವಸೇನೆ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಿಕೊಂಡಿದೆ.

ಬಿಜೆಪಿಗೆ ಮತ ಹಾಕಿ ಅಧಿಕಾರಕ್ಕೆ ತಂದ ಜನರು ಇದಕ್ಕೆ ಜವಾಬ್ದಾರರು. ಜನರ ಈ ತಪ್ಪು ಆಯ್ಕೆಗೆ ಸೈನಿಕರು ಬೆಲೆ ತೆರಬೇಕಾಗಿದೆ ಎಂದು ಶಿವಸೇನೆ ಹೇಳಿದೆ. ಮನೋಹರ್ ಪರ್ರಿಕರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿಗೆ ಹೆಚ್ಚುವರಿಯಾಗಿ ರಕ್ಷಣಾ ಸಚಿವ ಸ್ಥಾನ ನೀಡಲಾಗಿದೆ.  

ಕಾಶ್ಮೀರದಲ್ಲಿ ಸೇನಾಧಿಕಾರಿ ಉಮರ್ ಫಯಾಜ್  ಹತ್ಯೆ  ವಿಚಾರದಲ್ಲಿ ಶಿವಸೇನೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.