ಸರ್ಕಾರಿ ಶಾಲೆಯ ಒಂದರಿಂದ ಎಂಟನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಸಮವಸ್ತ್ರ ಹಂಚಿಕೆ ವಿಚಾರದಲ್ಲಿ ಹಗರಣ ನಡೆದಿದ್ದು ಕಮಿಷನ್‌ ಹೊಡೆಯುವ ಸಲುವಾಗಿ ಈ ಹಿಂದಿನ ಸರ್ಕಾರ ಅನ್ಯರಾಜ್ಯದ ಬೃಹತ್‌ ಕಂಪನಿಗಳಿಗೆ ಗುತ್ತಿಗೆ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆರೋಪಿಸಿದ್ದಾರೆ.

ಹುಬ್ಬಳ್ಳಿ : ಸರ್ಕಾರಿ ಶಾಲೆಯ ಒಂದರಿಂದ ಎಂಟನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಸಮವಸ್ತ್ರ ಹಂಚಿಕೆ ವಿಚಾರದಲ್ಲಿ ಹಗರಣ ನಡೆದಿದ್ದು ಕಮಿಷನ್‌ ಹೊಡೆಯುವ ಸಲುವಾಗಿ ಈ ಹಿಂದಿನ ಸರ್ಕಾರ ಅನ್ಯರಾಜ್ಯದ ಬೃಹತ್‌ ಕಂಪನಿಗಳಿಗೆ ಗುತ್ತಿಗೆ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆರೋಪಿಸಿದ್ದಾರೆ. .96 ಕೋಟಿಗೂ ಅಧಿಕ ಮೊತ್ತದ ಈ ಯೋಜನೆಯಲ್ಲಾಗಿರುವ ಅವ್ಯವಹಾರದ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿಗೆ ಪತ್ರ ಬರೆಯುವುದಾಗಿ ತಿಳಿಸಿರುವ ಅವರು ಒಂದು ವೇಳೆ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಅವರೂ ಇದರಲ್ಲಿ ಭಾಗಿಯಾಗಿದ್ದರೆ ಎಂದೇ ಅರ್ಥ ಎಂದು ಭಾವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ನಗರದಲ್ಲಿ ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮವಸ್ತ್ರವನ್ನು ಸ್ಥಳೀಯವಾಗಿಯೇ ಶಾಲಾ ಆಡಳಿತ ಮಂಡಳಿ ಉಸ್ತುವಾರಿಯಲ್ಲಿ ನೀಡಬೇಕೆಂಬ ನಿಯಮ ಇದ್ದರೂ ತಮಗೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ನಿಯಮಗಳನ್ನು ಗಾಳಿಗೆ ತೂರಿದ ಈ ಹಿಂದಿನ ಸರ್ಕಾರ, ಮಾಚ್‌ರ್‍ ತಿಂಗಳಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕಾನೂನಿಗೆ ತಿದ್ದುಪಡಿ ಮಾಡಿದೆ ಎಂದು ಆರೋಪಿಸಿದರು.

ಈ ಮೊದಲು ಸಮವಸ್ತ್ರಗಳನ್ನು ಸ್ಥಳೀಯವಾಗಿ ಹೊಲಿಯಲು ನೀಡಲಾಗುತ್ತಿತ್ತು. ಇದರಿಂದ ರಾಜ್ಯದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗವೂ ದೊರಕಿದಂತಾಗುತ್ತಿತ್ತು. ಆದರೆ, ಈಗ ಇದನ್ನು ಅನ್ಯ ರಾಜ್ಯದ ಕಂಪನಿಗಳಿಗೆ ಗುತ್ತಿಗೆ ನೀಡಿರುವುದನ್ನು ನೋಡಿದರೆ, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.

ಟೆಂಡರ್‌ ರದ್ದುಪಡಿಸಿ: 2017ರ ಮೇ 16ರಂದು ಆದೇಶ ಹೊರಡಿಸಿ 2018ರ ಜೂನ್‌ 7ರಂದು .90 ಕೋಟಿ ವೆಚ್ಚದ ಟೆಂಡರ್‌ ನೋಟಿಫಿಕೇಶನ್‌ ಹೊರಡಿಸಲಾಗಿದೆ. ಬೆಂಗಳೂರು ವಿಭಾಗಕ್ಕೆ .22,99,71,340, ಮೈಸೂರು ವಿಭಾಗಕ್ಕೆ .14,36,70,141, ಬೆಳಗಾವಿ ವಿಭಾಗಕ್ಕೆ .32,05,29,020 ಹಾಗೂ ಕಲಬುರಗಿ ವಿಭಾಗಕ್ಕೆ .26,89,52,168 ಮೀಸಲಿಟ್ಟಿದೆ. ಒಟ್ಟು .96,31,22,669 ಮೊತ್ತದ ಬೃಹತ್‌ ಗೋಲ್‌ಮಾಲ್‌ ವ್ಯವಹಾರವಾಗಿದೆ. ಈ ಕೂಡಲೇ ಟೆಂಡರ್‌ ಪ್ರಕ್ರಿಯೆ ರದ್ದುಪಡಿಸಿ ಹಿಂದಿನಂತೆಯೇ ಸಮವಸ್ತ್ರ ವಿತರಣೆ ಮಾಡಬೇಕು. ಇಲ್ಲವೇ, ಖಾದಿ ಗ್ರಾಮೋದ್ಯೋಗ ಸಂಸ್ಥೆ ಅಥವಾ ಸ್ಥಳೀಯವಾಗಿ ಲಭ್ಯವಿರುವ ಸಂಸ್ಥೆ ಮೂಲಕ ಸಮವಸ್ತ್ರ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಹಕಾರವೂ ಇದಕ್ಕೆ ಇದೆ ಎಂದು ತಿಳಿಯಬೇಕಾಗುತ್ತದೆ. ಈ ಕುರಿತು ಕೇಂದ್ರ ಸರ್ಕಾರದ ಶಿಕ್ಷಣ ಸಚಿವರಿಗೂ ಪತ್ರ ಬರೆದು ದೂರು ಸಲ್ಲಿಸಲಾಗುವುದು ಎಂದರು.

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಕಿತ್ತೊಗೆಯುವ ಯಾವುದೇ ಇರಾದೆ ನಮಗಿಲ್ಲ. ಹೀಗಾಗಿ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ತೀರ್ಮಾನಿಸಿದ್ದೇವೆ. ಆದರೆ, ಸಮ್ಮಿಶ್ರ ಸರ್ಕಾರ ತಮ್ಮ ತಮ್ಮೊಳಗೆ ಕಿತ್ತಾಟದಿಂದ ಪತನವಾಗಲಿದೆ. ಈ ಸ್ಥಿತಿಯನ್ನು ಅರಿತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ವರ್ಷ ತಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎನ್ನುವ ಮೂಲಕ ವರ್ಷದ ನಂತರ ಸರ್ಕಾರ ಬೀಳುವ ಮುನ್ಸೂಚನೆ ನೀಡಿದ್ದಾರೆ.

- ಜಗದೀಶ್‌ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ