ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ನಕಾರ ಸೂಚಿಸಿ ಅರ್ಜಿ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರ ದಿಟ್ಟನಿರ್ಧಾರ ತಾಳಿದ್ದು, ಕೇವಲ ಮೂರೇ ದಿನಗಳಲ್ಲಿ ರಾಜ್ಯಕ್ಕೆ ಎದುರಾಗಿದ್ದ ಕಂಟಕ ತಪ್ಪಿಹೋಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಅಭಿಪ್ರಾಯಪಟ್ಟರು.

ಸೋಮವಾರ ನಡೆದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೆ.30ರಂದು ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಮಂಡಳಿ ರಚನೆಗೆ ಒಪ್ಪಿಗೆ ಸೂಚಿಸುವ ಮೂಲಕ ಪ್ರಮಾದ ಎಸಗಿದ್ದರು. ಆದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನಿರ್ಧಾರ ಬದಲಿಸುವಲ್ಲಿ ಶ್ರಮಿಸಿದ ಕೇಂದ್ರ ಸಚಿವರಾದ ಅನಂತ್‌ಕುಮಾರ್‌, ಸದಾನಂದಗೌಡ, ರಮೇಶ್‌ ಜಿಗಜಿಣಗಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೆಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.

ಸೆ.2ರಂದು ರಾಜ್ಯ ಸರ್ಕಾರದ ಪರ ವಕೀಲರು ಸ್ವಯಂಪ್ರೇರಿತವಾಗಿ 10 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದ್ದರಿಂದ ಕಾವೇರಿ ವಿಚಾರದಲ್ಲಿ ಸಮಸ್ಯೆ ಉಂಟಾಗಲು ಮೂಲಕ ಕಾರಣವಾಯಿತು. ಅದಲ್ಲದೇ ಆದೇಶ ಅನುಷ್ಠಾನ ಕುರಿತಂತೆ ನಾರಿಮನ್‌ ಕೋರ್ಟ್‌ ಮುಂದೆ ಹೇಳಿಕೆ ನೀಡಿದ್ದು ಕೂಡ ರಾಜ್ಯಕ್ಕೆ ಹಿನ್ನಡೆಗೆ ಕಾರಣವಾಗಿದೆ ಎಂದು ಹೇಳಿದರು.

ಈಗಾಗಲೇ ಕುಡಿಯುವ ನೀರಿನ ಉದ್ದೇಶಕ್ಕೆ ಸರ್ಕಾರ ನೀರು ಬಿಡದಿರಲು ತೀರ್ಮಾನ ತೆಗೆದುಕೊಂಡಿದೆ. ಆದರೆ ಆ ಭಾಗದ ರೈತರು ಹಾಗೂ ಶಾಸಕರು ಬೆಳೆಗಳಿಗೆ ನೀರು ಬಿಡುವಂತೆ ಕೋರಿದ್ದಾರೆ. ಶಾಸಕ ಪುಟ್ಟಣ್ಣಯ್ಯ ಕೂಡ ಒತ್ತಡ ಹೇರುತ್ತಿದ್ದಾರೆ. ಅವರ ಸಲಹೆ ಮೇರೆಗೆ ರೈತರ ಬೆಳೆಗಳಿಗೆ ನೀರು ಬಿಡುವುದಾದರೆ ತಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ನೀರು ಬಿಡುವ ಜತೆಗೆ ಈಗಾಗಲೇ ನಷ್ಟಕ್ಕೆ ಈಡಾಗಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

(ಕನ್ನಡಪ್ರಭ ವಾರ್ತೆ)