ನವದೆಹಲಿ[ಜು.21]: ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರು 3 ರಾಜ್ಯಗಳೊಂದಿಗೆ ನಂಟು ಹೊಂದಿದ್ದ ಅಪರೂಪದ ರಾಜಕಾರಣಿ. ಪಂಜಾಬ್‌ನಲ್ಲಿ ಜನಿಸಿ, ಉತ್ತರಪ್ರದೇಶ ಮೂಲಕ ರಾಜಕೀಯ ಪ್ರವೇಶಿಸಿದ ಅವರು, ಕೊನೆಗೆ ದೆಹಲಿಯನ್ನು ಆಳಿದವರು. ಜೀವನದ ಕೊನೆಯ ದಿನಗಳವರೆಗೂ ಕಾಂಗ್ರೆಸ್ಟಿನ ಕಟ್ಟಾಳು ಆಗಿದ್ದ ವಿಶಿಷ್ಟರಾಜಕಾರಣಿ.

1938ರ ಮಾ.31ರಂದು ಪಂಜಾಬಿನ ಕಪುರ್ತಲದಲ್ಲಿ ಜನಿಸಿದ ಶೀಲಾ ಅವರು ಓದಿದ್ದೆಲ್ಲಾ ದೆಹಲಿಯಲ್ಲಿ. ಉತ್ತರಪ್ರದೇಶದ ಉನ್ನಾವೋ ಮೂಲದ ಐಎಎಸ್‌ ಅಧಿಕಾರಿ ವಿನೋದ್‌ ದೀಕ್ಷಿತ್‌ (ಪಂಜಾಬಿನ ಮಾಜಿ ರಾಜ್ಯಪಾಲರಾಗಿದ್ದವರು) ಅವರನ್ನು ವರಿಸಿದ ಬಳಿಕ ಶೀಲಾ ಅವರ ಹೆಸರಿಗೆ ‘ದೀಕ್ಷಿತ್‌’ ಸೇರಿಕೊಂಡಿತು.

1984ರಲ್ಲಿ ಉತ್ತರಪ್ರದೇಶದ ಕನ್ನೌಜ್‌ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದ ಶೀಲಾ ಅವರನ್ನು ರಾಜೀವ್‌ ಗಾಂಧಿ ಅವರು 1986ರಲ್ಲಿ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರನ್ನಾಗಿಸಿದ್ದರು. ಬಳಿಕ ಪ್ರಧಾನಮಂತ್ರಿ ಕಾರ್ಯಾಲಯ ಖಾತೆಯನ್ನು ನೀಡಿದರು. 1990ರಲ್ಲಿ ಉತ್ತರಪ್ರದೇಶ ಸರ್ಕಾರ ಮಹಿಳಾ ದೌರ್ಜನ್ಯ ನಡೆಸುತ್ತಿದೆ ಎಂದು ಹೋರಾಟಕ್ಕಿಳಿದಿದ್ದ ಶೀಲಾ ಹಾಗೂ ಅವರ 82 ಸಂಗಡಿಗರನ್ನು ಅಲ್ಲಿನ ಸರ್ಕಾರ ಬಂಧಿಸಿ 23 ದಿನಗಳ ಕಾಲ ಜೈಲಿಗೆ ಅಟ್ಟಿತ್ತು.

ಕಾಂಗ್ರೆಸ್ ಹಿರಿತಲೆ, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಇನ್ನಿಲ್ಲ!

1998ರಲ್ಲಿ ದೆಹಲಿಯಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಶೀಲಾ ಪರಾಭವಗೊಂಡಿದ್ದರು. ಅದೇ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿ ಮುಖ್ಯಮಂತ್ರಿ ಹುದ್ದೆಗೇರಿದರು. ಸತತ ಮೂರು ಅವಧಿಗೆ ಸಿಎಂ ಪಟ್ಟನಿರ್ವಹಿಸಿದ ಅವರು, ದೆಹಲಿಯ ಹೆಗ್ಗುರುತಾಗಿರುವ ಮೆಟ್ರೋ ಯೋಜನೆಯ ರೂವಾರಿಗಳಲ್ಲಿ ಒಬ್ಬರು. ದೆಹಲಿಯ ರೂಪಾಂತರಕ್ಕೆ ಕಾರಣರಾದವರು. 2013ರಲ್ಲಿ ಅಧಿಕಾರ ಕಳೆದುಕೊಂಡರು.

2017ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಶೀಲಾ ಅವರನ್ನು ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. 2019ರ ಲೋಕಸಭೆ ಚುನಾವಣೆಗೆ ದೆಹಲಿಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ ಶೀಲಾ ಪರಾಭವಗೊಂಡಿದ್ದರು. ದೆಹಲಿ ಕಾಂಗ್ರೆಸ್‌ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು.

 

3 ಬಾರಿ ದೆಹಲಿ ಚುಕ್ಕಾಣಿ:

ರಾಜಕೀಯ ಕುಟುಂಬದ ಹಿನ್ನೆಲೆಯಿಂದಲೇ ಬಂದಿದ್ದ ಶೀಲಾ ದೀಕ್ಷಿತ್‌ ಮೊದಲು ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿ, ಬಳಿಕ ದಿಲ್ಲಿ ರಾಜಕಾರಣಕ್ಕೆ ಕಾಲಿಟ್ಟಿದ್ದರು. 1998ರಿಂದ ​2013ರ ಅವಧಿಯಲ್ಲಿ ಸತತ ಮೂರು ದೆಹಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ, ಶೀಲಾ ದೀಕ್ಷಿತ್‌ ಈ ಸಮಯದಲ್ಲೇ ದೆಹಲಿಗೆ ಆಧುನಿಕತೆಯ ಸ್ಪರ್ಶ ನೀಡಿದ್ದರು. ಮೆಟ್ರೋ ಯೋಜನೆ ಸೇರಿದಂತೆ ಬೃಹತ್‌ ಮೂಲ ಸೌಕರ್ಯ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದರು. ಸ್ನೇಹ ಮತ್ತು ಸೌಹಾರ್ದಯುತ ವ್ಯಕ್ತಿತ್ವಕ್ಕೆ ಹೆಸರಾದ ಶೀಲಾ ದಕ್ಷ ಆಡಳಿತಗಾರ್ತಿಯಾಗಿಯೂ ಹೆಸರು ಮಾಡಿದ್ದರು. ಎಲ್ಲ ಪಕ್ಷಗಳ ಮುಖಂಡರ ಜೊತೆಗೂ ಉತ್ತಮ ಸಂಬಂಧವನ್ನು ಕಾಪಾಡಿಕೊಂಡಿದ್ದರು.

ಶೀಲಾ ದೀಕ್ಷಿತ್ ನಿಧನಕ್ಕೆ ಪ್ರಧಾನಿ ಸೇರಿದಂತೆ ಗಣ್ಯರ ಕಂಬನಿ!

ರಾಜೀವ್‌ ಗಾಂಧಿ ಅವಧಿಯಲ್ಲಿ ರಾಜಕೀಯ ಮುಂಚೂಣಿಗೆ ಬಂದು, ರಾಜೀವ್‌ ಹತ್ಯೆ ಬಳಿಕ ತೆರೆಮರೆಗೆ ಸರಿದು, ಮತ್ತೆ ಸೋನಿಯಾ ಅಧ್ಯಕ್ಷರಾದ ಬಳಿಕ ಪಕ್ಷದಲ್ಲಿ ಮುಂಚೂಣಿ ನೆಲೆಗೆ ಬಂದಿದ್ದರು. ಗಾಂಧೀ ಕುಟುಂಬದ ಅತ್ಯಂತ ಆಪ್ತರಾಗಿದ್ದ ಶೀಲಾ, ಸೋನಿಯಾರ ಹೆಗಲು ಮೇಲೆ ಕೈಹಾಕುವಷ್ಟುಆತ್ಮೀಯತೆ ಹೊಂದಿದ್ದರು. 2013ರ ವಿಧಾನಸಭಾ ಸೋಲಿನ ಬಳಿಕ ಶೀಲಾ ಯುಗಾಂತ್ಯವಾಯ್ತು ಎನ್ನುವಷ್ಟರಲ್ಲೇ, 2019ರ ಲೋಕಸಭಾ ಚುನಾವಣೆ ವೇಳೆ ಮತ್ತೆ ಅವರನ್ನು ದೆಹಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಪಕ್ಷವನ್ನು ಗೆಲ್ಲಿಸುವಲ್ಲಿ ವಿಫಲವಾಗುವುದರ ಜೊತೆಗೆ ತಾವು ಕೂಡಾ ಸೋಲನ್ನಪ್ಪಿದ್ದರು.