ನವದೆಹಲಿ(ಜು.20): ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಶೀಲಾ ದೀಕ್ಷಿತ್ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ದೆಹಲಿ ಅಭಿವೃದ್ಧಿಯಲ್ಲಿ ಶೀಲಾ ದೀಕ್ಷಿತ್ ಕೊಡುಗೆ ಅಪಾರ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಶೀಲಾ ದೀಕ್ಷಿತ್ ನಿಧನಕ್ಕೆ ಕಂಬನಿ ಮಿಡಿದಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೆಹಲಿ ಸಿಎಂ ಆಗಿ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಎಂದು ಹೇಳಿದ್ದಾರೆ.

ಶೀಲಾ ದೀಕ್ಷಿತ್ ನಿಧನ ತಮಗೆ ತೀವ್ರ ಆಘಾತ ತಂದಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಅದರಂತೆ ಶೀಲಾ ದೀಕ್ಷಿತ್ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿರುವ ರಾಹುಲ್ ಗಾಂಧಿ, ಶೀಲಾ ಕಾಂಗ್ರೆಸ್’ನ ಅತ್ಯಂತ ಪ್ರೀತಿ ಪಾತ್ರ ಮಗಳು ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ದೆಹಲಿ ಅಭಿವೃದ್ಧಿಯಲ್ಲಿ ಶೀಲಾ ದೀಕ್ಷಿತ್ ಪಾತ್ರವನ್ನು ದೆಹಲಿ ಜನತೆ ಎಂದಿಗೂ ಮರೆಯುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ.

ಇನ್ನು ಹಿರಿಯ ಕಾಂಗ್ರೆಸ್ ನಾಯಕಿಯ ನಿಧನಕ್ಕೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌, ಬಿಜೆಪಿ ಸಂಸದ ಗೌತಮ್ ಗಂಭೀರ್, ಬಾಲಿವಡ್ ನಟ ಅಕ್ಷಯ್‌ ಕುಮಾರ್‌ ಕೂಡ ಕಂಬನಿ ಮಿಡಿದಿದ್ದಾರೆ.

ಸದ್ಯ ಶೀಲಾ ದೀಕ್ಷಿತ್ ಪಾರ್ಥೀವ ಶರೀರವನ್ನು ಅವರ ಮನೆಗೆ ಕರೆತರಲಾಗಿದ್ದು, ಪ್ರಧಾನಿ ಮೋದಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ  ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.

ನಾಳೆ(ಜು.21) ಶೀಲಾ ದೀಕ್ಷಿತ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.