Asianet Suvarna News Asianet Suvarna News

ಜೈಲಿನಲ್ಲಿ ಶಶಿಕಲಾ ಕೃಷಿ :ಅಣಬೆ, ಕಲ್ಲಂಗಡಿ ಬೆಳೆಯುತ್ತಿರುವ ಚಿನ್ನಮ್ಮ

ತಮಿಳುನಾಡಿನ ರಾಜಕೀಯ ರಂಗದ ಧ್ರುವತಾರೆಗಳಾದ ಎಂ.ಜಿ.ರಾಮಚಂದ್ರನ್, ಜೆ.ಜಯಲಲಿತಾ ಮೃತಪಟ್ಟ ಡಿಸೆಂಬರ್ ತಿಂಗಳಿನಿಂದ 2 ತಿಂಗಳ ಕಾಲ ಮೌನವ್ರತ ಆಚರಿಸುತ್ತಿರುವ ಚಿನ್ನಮ್ಮ ಅಲಿಯಾಸ್ ಶಶಿಕಲಾ ನಟರಾಜನ್ ಈಗ ಜೈಲಿನಲ್ಲಿ ಅಣಬೆ, ಕಲ್ಲಂಗಡಿ ಬೆಳೆಯುತ್ತಿದ್ದಾರೆ.

Shashikala Agriculture In Jail

ಬೆಂಗಳೂರು : ತಮಿಳುನಾಡಿನ ರಾಜಕೀಯ ರಂಗದ ಧ್ರುವತಾರೆಗಳಾದ ಎಂ.ಜಿ.ರಾಮಚಂದ್ರನ್, ಜೆ.ಜಯಲಲಿತಾ ಮೃತಪಟ್ಟ ಡಿಸೆಂಬರ್ ತಿಂಗಳಿನಿಂದ 2 ತಿಂಗಳ ಕಾಲ ಮೌನವ್ರತ ಆಚರಿಸುತ್ತಿರುವ ಚಿನ್ನಮ್ಮ ಅಲಿಯಾಸ್ ಶಶಿಕಲಾ ನಟರಾಜನ್ ಈಗ ಜೈಲಿನಲ್ಲಿ ಅಣಬೆ, ಕಲ್ಲಂಗಡಿ ಬೆಳೆಯುತ್ತಿದ್ದಾರೆ.

ಜೊತೆಗೆ, ಟೈಲರಿಂಗ್, ಎಂಬ್ರಾಯಿಡರಿ, ಕಂಪ್ಯೂಟರ್, ಕನ್ನಡ ಕಲಿಯುತ್ತ, ಆಕರ್ಷಕವಾದ ಬಳೆಗಳನ್ನು ತಯಾರಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಮಾನ್ಯ ಕೈದಿಯ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಕಳೆದ 55 ದಿನಗಳಿಂದ ಯಾರೊಂದಿಗೂ ಮಾತನಾಡುತ್ತಿಲ್ಲ. ಒಂದು ಕಾಲದಲ್ಲಿ ಮನೆ ತುಂಬಾ ಆಳುಕಾಳು ಗಳನ್ನಿಟ್ಟುಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದ ಈಗ ತೋಟಗಾರಿಕೆ ಮಾಡುತ್ತಿದ್ದಾರೆ. ಸಾಮಾನ್ಯ ಮಹಿಳೆಯಂತೆ ಹೊಲಿಗೆ, ಕಸೂತಿ, ಬಳೆ ಮಾಡುವ ಕೆಲಸ ಮಾಡುತ್ತಿದ್ದಾರೆ.

ದಿ.ಜಯಲಲಿತಾ ಮುಖ್ಯ ಆರೋಪಿ ಯಾಗಿದ್ದ ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ಶಶಿಕಲಾ ನಟರಾಜನ್ ಈಗ ಮಹಿಳಾ ಬ್ಯಾರಕ್‌ನ ಮೂಲೆಯಲ್ಲಿ ನಾದಿನಿ ಜೆ.ಇಳವರಸಿ ಜೊತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಅದಕ್ಕಾಗಿ ಮೌನವಾಗಿ ಕೊರಗುತ್ತಿದ್ದಾರೆ. 2016ರ ಡಿ.5ರಂದು ಜಯಲಲಿತಾ ಸಾವಿಗೀಡಾದರೆ, ಎಂಜಿಆರ್ ನಿಧನ ಹೊಂದಿದ್ದು  1987ರ ಡಿ.24. ಹೀಗಾಗಿ ಡಿಸೆಂಬರ್ 5ರಿಂದ ಫೆಬ್ರವರಿ 5ರವರೆಗೆ ಸತತ ಎರಡು ತಿಂಗಳ ಮೌನವ್ರತ ಆಚರಣೆಯಲ್ಲಿರುವ ಶಶಿಕಲಾ ನಟರಾಜನ್ ಅವರನ್ನು ‘ಕನ್ನಡ ಪ್ರಭ’ ಜೈಲಿನ ಬ್ಯಾರಕ್‌ನಲ್ಲಿ ಎದುರಾದಾಗ ಕಂಡುಬಂದ ದೃಶ್ಯಗಳಿವು.

ಪ್ರತಿ ವರ್ಷ ಮೌನಾಚರಣೆ: ಜಯಲಲಿತಾ ಜೊತೆ ಶಶಿಕಲಾ ಅವರದು ದಶಕಗಳ ಆಪ್ತ ಸ್ನೇಹ. ಹಾಗೆಯೇ, ಜಯಲಲಿತಾಗೆ ಆರಾಧ್ಯ ದೈವವಾಗಿದ್ದವರು ಎಂಜಿ ಆರ್. ಅವರಿಬ್ಬರ ಆತ್ಮಕ್ಕೆ ಶಾಂತಿ ಸಿಗಲೆಂದು ಕಳೆದ ವರ್ಷವೂ ಶಶಿಕಲಾ ಎರಡು ತಿಂಗಳ ಕಾಲ ಮೌನವ್ರತ ಆಚರಿಸಿದ್ದರು.

ಅದರಂತೆ ಈ ಬಾರಿ ಜೈಲಿನಲ್ಲೇ ಮೌನವ್ರತ ಆಚರಿಸುತ್ತಿದ್ದಾರೆ. ಹೀಗಾಗಿ ಅವರು ಯಾರೊಂದಿಗೂ ಮಾತನಾಡುತ್ತಿಲ್ಲ. ‘ಕನ್ನಡ ಪ್ರಭ’ ಪ್ರತಿನಿಧಿ ಮಾತನಾಡಿಸಲು ಯತ್ನಿಸಿದಾಗಲೂ ಅವರಿಗೆ ಧ್ವನಿಯಾಗಿದ್ದು ಅದೇ ಬ್ಯಾರಕ್‌ನಲ್ಲಿ ಅವರ ಜೊತೆ ಶಿಕ್ಷೆ ಅನುಭವಿಸುತ್ತಿರುವ ನಾದಿನಿ ಇಳವರಸಿ ಅಲಿಯಾಸ್ ಜಯರಾಮನ್ ಇಳವರಸಿ. ಸದ್ಯಕ್ಕೆ ಶಶಿಕಲಾ ಕೈಸನ್ನೆಯಿಂದಲೇ ತನ್ನ ಜತೆಗಿರುವ ಇಳವರಸಿ ಹಾಗೂ ಜೈಲು ಸಿಬ್ಬಂದಿಗೆ ಪ್ರತಿಕ್ರಿಯಿಸುತ್ತಾರೆ. ದಿನ ನಿತ್ಯ ಬೆಳಗ್ಗೆ 6.30ರ ಸುಮಾರಿಗೆ ಏಳುವ ಶಶಿಕಲಾ, ತಾವಿರುವ ಕೊಠಡಿಯ ಮುಂಭಾಗದ ಪಡಸಾಲೆಯನ್ನು ಗುಡಿಸುತ್ತಾರೆ. ಈ ಕೆಲಸದ ಬಳಿಕ ಬ್ಯಾರಕ್‌ನಲ್ಲಿನ ಕೊಠಡಿಯಲ್ಲಿ ದೇವರ ಪೂಜೆ ಕೈಗೊಳ್ಳುತ್ತಾರೆ. ನಂತರ ಇಳವರಸಿ ಜತೆ ಉಪಾಹಾರ ಸೇವಿಸಿ ಬ್ಯಾರಕ್‌ಗೆ ವಾಪಸಾಗುತ್ತಾರೆ. ಈ ಮಧ್ಯೆ ಜೈಲಿನ ಶಾಲೆಗೆ ಹೋಗಿ ಕಂಪ್ಯೂಟರ್, ಕನ್ನಡ ಭಾಷೆ ಕಲಿಕೆ, ಇನ್ನಿತರ ಚಟುವಟಿಕೆಯಲ್ಲಿ ಭಾಗಿಯಾಗಿತ್ತಾರೆ.

ಕಾಗದದಲ್ಲಿ ಉತ್ತರ: ಶಶಿಕಲಾ ಅವರನ್ನು 15 ದಿನಗಳಿಗೊಮ್ಮೆ ಭೇಟಿಯಾಗಲು ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ.ದಿನಕರನ್ ಜೈಲಿಗೆ ಬರುತ್ತಾರೆ. 45 ನಿಮಿಷಗಳ ಮಾತುಕತೆ ವೇಳೆ ದಿನಕರನ್ ಮಾತು ಅಲಿಸುವ ಶಶಿಕಲಾ ಬಳಿಕ ಹಾಳೆಯೊಂದರಲ್ಲಿ ಬರೆದು ದಿನಕರನ್ ಮಾತಿಗೆ ಉತ್ತರ ನೀಡುತ್ತಾರೆ ಎಂದು ಜೈಲಿನ ಮೂಲಗಳು ಹೇಳಿವೆ.

ಜೀವನಕ್ಕೆ ಚಿಪ್ಪು ಅಣಬೆ ಬೇಸಾಯ: ಶಶಿಕಲಾ ಅವರು ಜೈಲಿನಲ್ಲಿ ಉಪಜೀವನಕ್ಕೆ ಚಿಪ್ಪು ಅಣಬೆ ಬೇಸಾಯ ಮಾಡುತ್ತಿದ್ದಾರೆ. ಮೊದಲಿನಿಂದಲೂ ಅಣಬೆ ಬೆಳೆಯುವುದರ ಬಗ್ಗೆ ಆಸಕ್ತಿ ಹೊಂದಿದ್ದ ಅವರು ತಾವೇ ಕೊಠಡಿಯೊಂದರಲ್ಲಿ ಕುಂಡಗಳಲ್ಲಿ ಚಿಪ್ಪು ಅಣಬೆ ಬೆಳೆದಿದ್ದಾರೆ. ಅಷ್ಟು ಮಾತ್ರವಲ್ಲ ಮಹಿಳಾ ಬ್ಯಾರಕ್‌ನ ಹಿಂಬದಿ ಇರುವ ನಾಲ್ಕು ಗುಂಟೆ ಜಾಗದಲ್ಲಿ ಶಶಿಕಲಾ ಅವರು ಕಲ್ಲಂಗಡಿ ಬೆಳೆದಿದ್ದಾರೆ. ಈ ಎರಡು ಬೆಳೆಗಳನ್ನು ಪೂರ್ಣ ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಟೈಲರಿಂಗ್ ಕಲಿಕೆ: ಸಜಾ ಬಂಧಿಗಳಿಗೆ ಟೈಲರಿಂಗ್ ಮತ್ತು ಇನ್ನಿತರ ಕೆಲಸಗಳ ಬಗ್ಗೆ ಕಾರಾಗೃಹದಲ್ಲಿ ತರಬೇತಿ ನೀಡಲಾಗುತ್ತದೆ. ಶಶಿಕಲಾ ಅವರು ಜೈಲಿನಲ್ಲಿ ನಿತ್ಯ ಎರಡು ತಾಸು ಟೈಲರಿಂಗ್ ಮತ್ತು ಕಸೂತಿ (ಎಂಬ್ರಾಯಿಡರಿ) ಮಾಡುವುದನ್ನು ಕಲಿಯುತ್ತಿದ್ದಾರೆ. ಈಗಾಗಲೇ ಅವರು ಕೆಲವು ಬಟ್ಟೆಗಳಿಗೆ ಕಸೂತಿ ಹಾಕಿದ್ದಾರೆ. ಆಕರ್ಷಕ ಬಳೆಗಳನ್ನು ತಯಾರು ಮಾಡಿ ಸಂಭ್ರಮ ಪಡುತ್ತಿದ್ದಾರೆ. ಕನ್ನಡಪ್ರಭಕ್ಕೆ ಅವರು ತಾವೇ ತಯಾರಿಸಿದ್ದ ಬಳೆ ತೋರಿಸಿ ಹರ್ಷ ವ್ಯಕ್ತಪಡಿಸಿದರು.

Follow Us:
Download App:
  • android
  • ios