ನವದೆಹಲಿ[ಜ.31]: ಕುಂಭಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸಚಿವ ಸಂಪುಟ ಸಭೆ ನಡೆಸಿ, ಸಚಿವರೊಂದಿಗೆ ಪುಣ್ಯ ಸ್ನಾನ ಮಾಡಿದ್ದ ಬಗ್ಗೆ ಅಪರೂಪಕ್ಕೆ ಹಿಂದಿಯಲ್ಲಿ ಟ್ವೀಟ್‌ ಮಾಡಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಲೇವಡಿ ಮಾಡಿದ್ದಾರೆ. ‘ಗಂಗೆಯೂ ಶುದ್ಧೀಕರಣವಾಗಬೇಕು, ಪಾಪಗಳೂ ತೊಳೆದು ಹೋಗಬೇಕು. ಸಂಗಮದಲ್ಲಿ ಪ್ರತಿಯೊಬ್ಬರೂ ಬೆತ್ತಲು. ಜೈ ಗಂಗಾ ಮಾತೆ’ ಎಂಬ ತರೂರ್‌ ಟ್ವೀಟರ್‌ ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದೆ.

ಶಶಿ ತರೂರ್‌ ಹೇಳಿಕೆ ಧಾರ್ಮಿಕ ನಿಂದನೆಗೆ ಸಮ. ಜನಿವಾರ ತೊಡುವೆ ಎಂದು ಹೇಳುವ ರಾಹುಲ್‌ ಅವರು ಈ ಬಗ್ಗೆ ಉತ್ತರ ನೀಡಬೇಕು. ಕೋಟ್ಯಂತರ ಹಿಂದುಗಳ ನಂಬಿಕೆ ಮೇಲೆ ದಾಳಿ ನಡೆಸಲು ಏಕೆ ಅನುಮತಿ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ, ಕುಂಭಮೇಳದ ಮಹತ್ವ ತರೂರ್‌ ಅವರಿಗೆ ಹೇಗೆ ಅರ್ಥವಾದೀತು. ಅವರಿರುವ ವಾತಾವರಣ, ಬೆಳೆದು ಬಂದ ಸಂಪ್ರದಾಯ ಅರ್ಥ ಮಾಡಿಕೊಳ್ಳಲು ಬಿಡುವುದಿಲ್ಲ. ಸಾಕಷ್ಟುತಪ್ಪು ಮಾಡಿರುವ ತರೂರ್‌ ಅವರು ಕುಂಭದಲ್ಲಿ ಪುಣ್ಯ ಸ್ನಾನ ಮಾಡಿದರೆ, ಪಶ್ಚಾತ್ತಾಪವನ್ನಾದರೂ ಪಡಬಹುದು ಎಂದು ಉತ್ತರಪ್ರದೇಶ ಸಚಿವ ಸಿದ್ಧಾರ್ಥನಾಥ ಸಿಂಗ್‌ ಟಾಂಗ್‌ ನೀಡಿದ್ದಾರೆ.