ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದಾಯ ಪ್ರಮಾಣ ನಿರೀಕ್ಷೆಗಿಂತಲೂ ಹೆಚ್ಚಾಗಿರುವುದರಿಂದ ಇದರ ಲಾಭವನ್ನು ಸ್ಥಳೀಯ ಸಂಸ್ಥೆಗಳಿಗೂ ನೀಡಲು ಶೇ.25ರಷ್ಟು ಅನುದಾನ ನೀಡಬೇಕು ಎಂದು ಬಿಬಿಎಂಪಿ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದ್ದು, ಈ ಸಂಬಂಧ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಿದ್ದಾರೆ.

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದಾಯ ಪ್ರಮಾಣ ನಿರೀಕ್ಷೆಗಿಂತಲೂ ಹೆಚ್ಚಾಗಿರುವುದರಿಂದ ಇದರ ಲಾಭವನ್ನು ಸ್ಥಳೀಯ ಸಂಸ್ಥೆಗಳಿಗೂ ನೀಡಲು ಶೇ.25ರಷ್ಟು ಅನುದಾನ ನೀಡಬೇಕು ಎಂದು ಬಿಬಿಎಂಪಿ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದ್ದು, ಈ ಸಂಬಂಧ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಿದ್ದಾರೆ.

ಮಂಗಳವಾರ ಜಿಎಸ್‌ಟಿ ಕುರಿತ ಗೊಂದಲಗಳ ಚರ್ಚೆಗಾಗಿಯೇ ಕರೆಯಲಾಗಿದ್ದ ಬಿಬಿಎಂಪಿ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಪಕ್ಷಾತೀತವಾಗಿ ಈ ತೀರ್ಮಾನಕ್ಕೆ ಬಂದರು. ಜಿಎಸ್‌ಟಿ ಜಾರಿಯಿಂದ ತೆರಿಗೆ ಪ್ರಮಾಣದಲ್ಲಿ ಎಷ್ಟು ಹೆಚ್ಚಾಗಲಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರೀಕ್ಷಿಸಿದ್ದವೋ ಅದಕ್ಕೂ ಮೀರಿ ಆದಾಯ ಬರುತ್ತಿದೆ. ಇನ್ನೂ ಕೂಡ ಜಿಎಸ್‌ಟಿ ಅನುಸಾರ ದರ ಪರಿಷ್ಕರಣೆ ನಡೆಯುತ್ತಿದೆ. ಹಾಗಾಗಿ ಆದಾಯ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಒಟ್ಟು ಆದಾಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಪ್ರತೀ ವರ್ಷ ಶೇ.25ರಷ್ಟು ಅನುದಾನ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳ ಮೇಲೆ ಒತ್ತಡ ತರುವ ಪ್ರಯತ್ನವಾಗಬೇಕಿದೆ. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳ ಸಭೆಯಲ್ಲಿ ಈ ಸಂಬಂಧ ನಿರ್ಣಯಗಳನ್ನು ಕೈಗೊಂಡು ಸರ್ಕಾರಗಳಿಗೆ ಕಳುಹಿಸಬೇಕು ಎಂದು ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಎಲ್ಲಾ ಸದಸ್ಯರಿಂದಲೂ ಸಹಮತ ವ್ಯಕ್ತವಾಗಿ, ಬಿಬಿಎಂಪಿಯ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಂಡಿಸಲು ತೀರ್ಮಾನ ಕೈಗೊಳ್ಳಲಾಯಿತು. ಮೇಯರ್ ಜಿ.ಪದ್ಮಾವತಿ ಅವರು ಸದಸ್ಯರ ಆಗ್ರಹದಂತೆ ಮುಂದಿನ ಸಭೆಯಲ್ಲಿ ನಿರ್ಣಯ ಮಂಡಿಸುವುದಾಗಿ ಭರವಸೆ ನೀಡಿದರು.

ನಿರೀಕ್ಷೆಗೂ ಮೀರಿದ ಆದಾಯ: ಜಿಎಸ್‌ಟಿ ಕುರಿತ ಚರ್ಚೆ ವೇಳೆ ವಿರೋಧ ಪಕ್ಷ ಬಿಜೆಪಿ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಜಿಎಸ್‌ಟಿ ಜಾರಿಯಿಂದ ಜುಲೈನಲ್ಲಿ 91 ಸಾವಿರ ಕೋಟಿ ಆದಾಯದ ನಿರೀಕ್ಷೆ ಕೇಂದ್ರ ಸರ್ಕಾರಕ್ಕಿತ್ತು. ಆದರೆ, 95 ಸಾವಿರ ಕೋಟಿ ರು. ಸಂಗ್ರಹವಾಗಿದೆ ಎಂದರು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ಮಾತನಾಡಿ, ಬಿಬಿಎಂಪಿಗೆ ಜಿಎಸ್‌ಟಿ ವರಮಾನದಲ್ಲಿ ಕನಿಷ್ಠ ಶೇ.20ರಿಂದ 25ರಷ್ಟು ಪಾಲನ್ನಾದರೂ ನೀಡಬೇಕು. ಈ ಬಗ್ಗೆ ಪಾಲಿಕೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕಿದೆ ಎಂದರು.

ಗುತ್ತಿಗೆದಾರರಿಗೆ ವಿನಾಯಿತಿ ಇಲ್ಲ: ಇದಕ್ಕೂ ಮುನ್ನ ಜಿಎಸ್‌ಟಿ ತಜ್ಞರಾದ ಸುನಿಲ್ ಹಾಗೂ ಮಧುಕರ್ ಹಿರೇಗಂಗೆ ಸಭೆಯಲ್ಲಿ ಜಿಎಸ್‌ಟಿ ಬಗ್ಗೆ ಸದಸ್ಯರ ಎಲ್ಲ ಪ್ರಶ್ನೆಗಳಿಗೆ ಸಮಗ್ರ ವಿವರಣೆ ನೀಡಿದರು. ಜಿಎಸ್’ಟಿಯಿಂದ ಗುತ್ತಿಗೆದಾರರಿಗೆ ಯಾವುದೇ ರೀತಿಯ ವಿನಾಯಿತಿ ದೊರೆಯುವುದಿಲ್ಲ. ಆದರೆ, ಕೆಲವು ನಾಗರಿಕ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಮಾತ್ರ ಕೊಂಚ ವಿನಾಯ್ತಿ ಸಿಗಬಹುದಾದರೂ ಕಾಮಗಾರಿಯ ಸಾಮಗ್ರಿ ಖರೀದಿಗೆ ಜಿಎಸ್‌ಟಿ ಅನ್ವಯವಾಗಲಿದೆ ಎಂದರು.

ವಿಶೇಷ ಸಭೆಗೆ ಬಿಜೆಪಿ ಆಕ್ಷೇಪ:

ಜಿಎಸ್‌ಟಿ ಕುರಿತು ಚರ್ಚೆಗೆ ಮಂಗಳವಾರ ಕರೆಯಲಾಗಿದ್ದ ವಿಶೇಷ ಕೌನ್ಸಿಲ್ ಸಭೆಗೆ ಬಿಜೆಪಿ ಸದಸ್ಯರು ಸಭೆ ಆರಂಭವಾಗುತ್ತಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪದ್ಮನಾಭರೆಡ್ಡಿ ಮಾತನಾಡಿ, ಬಿಬಿಎಂಪಿಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಘೋಷಣೆಯಾದ ಬಳಿಕ ಪಾಲಿಕೆ ಸಭೆ ಕರೆಯುವಂತಿಲ್ಲ ಎಂದರು. ಇದನ್ನು ಒಪ್ಪದ ಮೇಯರ್ ಪದ್ಮಾವತಿ, ಕಳೆದ ತಿಂಗಳೆ ಜಿಎಸ್‌ಟಿ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲು ವಿಶೇಷ ಸಭೆ ಕರೆಯುವುದಾಗಿ ತಿಳಿಸಲಾಗಿತ್ತು. ಅದರಂತೆ ಸಭೆ ಕರೆಯಲಾಗಿದೆ. ಇಲ್ಲಿ ಯಾವುದೇ ನಿರ್ಣಯಗಳ ಅಂಗೀಕಾರ ನಡೆಯುವುದಿಲ್ಲ. ಜಿಎಸ್‌ಟಿ ಬಗ್ಗೆ ತಜ್ಞರು ಮಾಹಿತಿ ನೀಡುತ್ತಾರೆ ಅಷ್ಟೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಆಯುಕ್ತ ಮಂಜುನಾಥ್ ಪ್ರಸಾದ್ ಬಹುತೇಕ ಸದಸ್ಯರಿಗೆ ಜಿಎಸ್‌ಟಿ ಬಗ್ಗೆ ಗೊಂದಲವಿದೆ. ಅದರ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲಾಗುವುದು ಎಂದರು.